
ಒಂದಲ್ಲ, ಎರಡಲ್ಲ, ಹತ್ತಲ್ಲ ಬರೋಬ್ಬರಿ 29 ವರ್ಷಗಳ ಬಳಿಕ ಪಾಕಿಸ್ತಾನ ನೆಲದಲ್ಲಿ ಐಸಿಸಿ ಕ್ರಿಕೆಟ್ ಟೂರ್ನಿ ನಡೆಯುತ್ತಿದೆ. ಸಾಕಷ್ಟು ಸವಾಲನ್ನುಎದುರಿಸಿ ಪಾಕ್ ಕ್ರಿಕೆಟ್ ಮಂಡಳಿ ಟೂರ್ನಿ ನಡೆಯುವಲ್ಲಿ ಯಶಸ್ವಿ ಕೂಡ ಆಗಿದೆ. ಆದರೆ ಕ್ರಿಕೆಟ್ ಫ್ಯಾನ್ಸ್ ಮಾತ್ರ ಪಾಕಿಸ್ತಾನದಲ್ಲಿ ಐಸಿಸಿ ಕ್ರಿಕೆಟ್ ಟೂರ್ನಿ ನಡೆಯುತ್ತಿರೋದನ್ನೇ ಮರೆತಿದ್ದಾರಾ ಎಂಬ ಅನುಮಾನ ಮೂಡುತ್ತಿದೆ. ಇದಕ್ಕೆ ಪ್ರಮುಖ ಕಾರಣ ಕರಾಚಿಯಲ್ಲಿ ನಡೆದ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ. ಸ್ಟೇಡಿಯಂನಲ್ಲಿ 30 ಸಾವಿರ ಆಸನದ ಸಾಮರ್ಥ್ಯವಿದ್ದರೂ ಪಾಕಿಸ್ತಾನ ಅಭಿಮಾನಿಗಳು ಕೆಲವೇ ಕಡೆ ಕಾಣಿಸುತ್ತಿದ್ದರು. ಉಳಿದಂತೆ ಎಲ್ಲ ಖಾಲಿ ಆಸನಗಳು ಎದ್ದು ಕಾಣುತ್ತಿತ್ತು. ಪಾಕಿಸ್ತಾನ ಕ್ರಿಕೆಟ್ ಫ್ಯಾನ್ಸ್ ಗೈರಿಗೆ ಇಂಗ್ಲೆಂಡ್ ದೇಶದ ಮಾಜಿ ಆಟಗಾರ ಮೈಕೆಲ್ ವಾನ್ ಕಾಲೆಳೆದಿದ್ದಾರೆ. 1996ರ ನಂತರ ಪಾಕಿಸ್ತಾನದಲ್ಲಿ ಐಸಿಸಿ ಟೂರ್ನಿ ನಡೆಯುತ್ತಿದೆ. ಆದರೆ ಅದನ್ನು ಅವರು ಸ್ಥಳೀಯರಿಗೆ ತಿಳಿಸುವಲ್ಲಿ ಮರೆತಿದ್ದಾರೆ ಎಂದು ತಮ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇನ್ನೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ಇದು ಏಕದಿನ ಕ್ರಿಕೆಟ್ ಜನಪ್ರಿಯತೆ ಕಳೆದುಕೊಳ್ಳುವ ಸೂಚನೆಯೇ? ಪಾಕ್ ಜನರಿಗೆ ಉಗ್ರರ ದಾಳಿ ಕಾಡುತ್ತಿದೆಯೇ? ಬಿಸಿಲಿಗೆ ಜನ ಹೆದರಿದರೇ? ಟಿಕೆಟ್ ದರ ದುಬಾರಿಯಾಗಿದೆಯೇ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.

ಅಭಿಷೇಕ್. ಎಸ್