
Ashwaveega News 24×7 ಅ. 08: ರೇಣುಕಾಸ್ವಾಮಿ ಕೊಲೆ ಪ್ರಕರಣ ಇನ್ನು ತಣ್ಣಗಾಗಿಲ್ಲ. ಒಂದು ಕಡೆ ಕೊಲೆ ಆರೋಪಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಜೊತೆ ಟೆಂಪಲ್ ರನ್ ಮಾಡ್ತಾ ಇದ್ದಾರೆ. ಇನ್ನೊಂದು ಕಡೆ ದರ್ಶನ್ ಗೆಳತಿ ಆರೋಪಿ ನಂ.1 ಪವಿತ್ರಾ ಗೌಡ ಅವರು ಸದ್ಯ ಕುಟುಂಬಸ್ಥರ ಜೊತೆ ಕಾಲ ಕಳೆಯುತ್ತಿದ್ದಾರೆ.
ಈ ನಡುವೆ ಆರೋಪಿಗಳಿಗೆ ಜಾಮೀನು ರದ್ದಾಗುವ ಸಾದ್ಯತೆ ಎದುರಾಗಿದೆ. ಹಾಗಾಗಿ ಪವಿತ್ರಾ ಗೌಡ ತನ್ನ ಜಾಮೀನು ರದ್ದು ಮಾಡದಂತೆ ಸುಪ್ರೀಂಗೆ ಮನವಿ ಮಾಡಿಕೊಂಡಿದ್ದಾರೆ.
ಹೌದು. . . ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳ ಜಾಮೀನು ರದ್ದು ಮಾಡುವಂತೆ ಕೋರಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಕೊನೆಗೂ ಕುತೂಹಲಕಾರಿ ಘಟ್ಟ ತಲುಪಿದೆ. ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿರುವ ಜಾಮೀನಿನ ಬಗ್ಗೆ ಸುಪ್ರೀಂ ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದು, ಆರೋಪಿಗಳ ಜಾಮೀನು ರದ್ದಾಗುವ ಸಾಧ್ಯತೆ ದಟ್ಟವಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪ್ರಮುಖ ಆರೋಪಿಗಳಾದ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಪರ ವಕೀಲರು ಆರೋಪಿಗಳ ಜಾಮೀನು ಯಾವ ಕಾರಣಕ್ಕೆ ರದ್ದಾಗಬಾರದೆಂದು ಕಾರಣಗಳನ್ನು ಲಿಖಿತ ರೂಪದಲ್ಲಿ ಸುಪ್ರೀಂಕೋರ್ಟ್ಗೆ ನೀಡಿದ್ದಾರೆ.
ʼʼನಾನು ಒಬ್ಬಂಟಿ ಪೋಷಕಳಾಗಿದ್ದು, ನನಗೆ 10ನೇ ತರಗತಿಯಲ್ಲಿ ಓದುತ್ತಿರುವ ಮಗಳನ್ನು ನೋಡಿಕೊಳ್ಳಬೇಕಿದೆ. ಮಗಳು ಒಂಟಿಯಾಗುತ್ತಾಳೆ ಜೊತೆಗೆ ವಯಸ್ಸಾದ ಪೋಷಕರು ಇದ್ದು, ಅವರಿಗೆ ನಾನೇ ಆಧಾರವಾಗಿದ್ದೇನೆ. ನನಗೆ ಯಾವುದೇ ಕ್ರಿಮಿನಲ್ ಹಿನ್ನಲೆ ಇಲ್ಲ, ನನ್ನ ಬಂಧನಕ್ಕೆ ಕಾರಣಗಳನ್ನು ಪೊಲೀಸರು ಲಿಖಿತವಾಗಿ ನೀಡಲಾಗಿಲ್ಲ , ಮಹಿಳೆಯಾಗಿರುವುದರಿಂದ ಜಾಮೀನು ರದ್ದು ಮಾಡುವುದು ಕಠಿಣ ಕ್ರಮವಾಗಲಿದೆʼʼ ಎಂದು ಸುಪ್ರೀಂಕೋರ್ಟ್ಗೆ ನಟಿ ಪವಿತ್ರಾ ಗೌಡ ವಿಶೇಷ ಮನವಿ ಮಾಡಿದ್ದಾರೆ.