Ashwaveega News 24×7 ಮಾರ್ಚ್ 18– 2026 : ಬೆಂಗಳೂರು : ಸ್ಯಾಂಡಲ್ವುಡ್ನಲ್ಲಿ ಯುಗಾದಿ ಹಬ್ಬದ ಸಂಭ್ರಮದ ನಡುವೆ ಹೊಸ ಸಿನಿಮಾಗಳ ಘೋಷಣೆ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಸಕ್ಸಸ್ಫುಲ್ ನಿರ್ದೇಶಕ ಪಿಸಿ ಶೇಖರ್ ತಮ್ಮ ಹೊಸ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ. ಈಗಾಗಲೇ ‘ರಾಗಾ’, ‘ರೊಮಿಯೋ’ ಸೇರಿದಂತೆ ಗಮನಾರ್ಹ ಸಿನಿಮಾಗಳನ್ನು ನೀಡಿರುವ ಅವರು, ತಮ್ಮ 12ನೇ ಸಿನಿಮಾವನ್ನು ನಿರ್ದೇಶಿಸಲು ಸಜ್ಜಾಗಿದ್ದಾರೆ .
ಈ ಹೊಸ ಪ್ರಾಜೆಕ್ಟ್ಗೆ ‘ಸಾರಥಿ’, ‘ಲ್ಯಾಂಡ್ಲಾರ್ಡ್’ ಸಿನಿಮಾಗಳ ಖ್ಯಾತಿಯ ನಿರ್ಮಾಪಕ ಕೆವಿ ಸತ್ಯಪ್ರಕಾಶ್ ಬಂಡವಾಳ ಹೂಡುತ್ತಿದ್ದಾರೆ. ಈ ಮೂಲಕ ಕೆವಿ ಸತ್ಯಪ್ರಕಾಶ್ ಮತ್ತು ಪಿಸಿ ಶೇಖರ್ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಚಿತ್ರ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ನಿರ್ಮಾಪಕರು ಹ್ಯಾಟ್ರಿಕ್ ಹಿಟ್ ನೀಡುವ ವಿಶ್ವಾಸದಲ್ಲಿದ್ದಾರೆ.

ಸದ್ಯ ಸಿನಿಮಾದ ಪೂರ್ವ ತಯಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ‘ಮಹಾನ್’ ಸಿನಿಮಾದ ಕೊನೆಯ ಹಂತದ ಶೂಟಿಂಗ್ನಲ್ಲಿ ನಿರತರಾಗಿರುವ ಪಿಸಿ ಶೇಖರ್, ಆ ಚಿತ್ರದ ಬಿಡುಗಡೆಯ ಮೊದಲುಲೇ ಮತ್ತೊಂದು ಪ್ರಾಜೆಕ್ಟ್ಗೆ ಚಾಲನೆ ನೀಡುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಸಿನಿಮಾ ಮೂಡಿಬರಲಿದೆ ಎಂದು ಅವರು ತಿಳಿಸಿದ್ದಾರೆ.

“ಸಾರಥಿ, ಲ್ಯಾಂಡ್ ದೊಡ್ಡ ಸಿನಿಮಾಗಳನ್ನು ನಿರ್ಮಿಸಿದ ನಿರ್ಮಾಪಕರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಖುಷಿಯ ವಿಚಾರ. ಶೀಘ್ರದಲ್ಲೇ ಚಿತ್ರದ ಟೈಟಲ್ ಹಾಗೂ ತಾರಾಗಣದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತೇವೆ” ಎಂದು ಪಿಸಿ ಶೇಖರ್ ತಿಳಿಸಿದ್ದಾರೆ.
ಇನ್ನೊಂದು ವಿಶೇಷವೆಂದರೆ, ನಟ-ನಿರ್ಮಾಪಕ ಮಿತ್ರ ಈ ಸಿನಿಮಾದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ರಾಗಾ’ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸಿದ್ದ ಮಿತ್ರ, ಇದೀಗ ಕ್ಯಾಮೆರಾ ಹಿಂದೆ ಕೆಲಸ ಮಾಡುತ್ತಿರುವುದು ಗಮನಾರ್ಹವಾಗಿದೆ. ಪಿಸಿ ಶೇಖರ್ ಮತ್ತು ಮಿತ್ರ ಕಾಂಬಿನೇಷನ್ ಹಿಂದೆಯೇ ಯಶಸ್ಸು ಕಂಡಿದ್ದರಿಂದ, ಈ ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ…
