Ashwaveega News 24×7 ಮಾರ್ಚ್ 18– 2026 : ಬೆಂಗಳೂರು : ರಾಜ್ಯ ರಾಜಕೀಯವನ್ನು ಕದಡಿ ಹಾಕಿದ್ದ ಪ್ರಜ್ವಲ್ ರೇವಣ್ಣ ವಿಡಿಯೋ ವೈರಲ್ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್ಐಟಿ) ಹಾಸನ ನ್ಯಾಯಾಲಯಕ್ಕೆ 13,712 ಪುಟಗಳ ವಿಶಾಲ ಚಾರ್ಜ್ಶೀಟ್ ಸಲ್ಲಿಸಿದೆ.
ಚಾರ್ಜ್ಶೀಟ್ ಪ್ರಕಾರ, ವೈರಲ್ ಆಗಿದ್ದ ವಿಡಿಯೋಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಂದಲೇ ವ್ಯವಸ್ಥಿತವಾಗಿ ಹಂಚಿಕೆ ಮಾಡಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಒಟ್ಟು 52 ಆರೋಪಿಗಳ ಪೈಕಿ 39 ಮಂದಿ ವಿರುದ್ಧ ಆರೋಪಗಳು ಸಾಬೀತಾಗಿವೆ ಎಂದು SIT ತಿಳಿಸಿದೆ .
ಈ ಪ್ರಕರಣದಲ್ಲಿ ಎ1 ಆಗಿ ನವೀನ್, ಎ2 ಆಗಿ ಪ್ರಜ್ವಲ್ ರೇವಣ್ಣ ಕಾರು ಚಾಲಕ ಕಾರ್ತಿಕ್, ಎ3 ಮತ್ತು ಎ4 ಆಗಿ ಚೇತನ್ ಸೇರಿ ಇನ್ನಿತರರು ಪ್ರಮುಖ ಆರೋಪಿಗಳಾಗಿದ್ದಾರೆ. ಆರೋಪಿಗಳು ಸುಮಾರು 70 ಪೆನ್ಡ್ರೈವ್ಗಳನ್ನು ಖರೀದಿಸಿ, ಯೋಜಿತವಾಗಿ ವಿಡಿಯೋಗಳನ್ನು ವೈರಲ್ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ .
ಎಸ್ಐಟಿ ಚಾರ್ಜ್ಶೀಟ್ನಲ್ಲಿ ಒಟ್ಟು 277 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದ್ದು, ತಾಂತ್ರಿಕ ವರದಿಗಳು ಮತ್ತು ಎಫ್ಎಸ್ಎಲ್ (ಫರೆನ್ಸಿಕ್ ಸೈನ್ಸ್ ಲ್ಯಾಬ್) ವರದಿಗಳ ಆಧಾರದಲ್ಲಿ ಆರೋಪಗಳನ್ನು ದೃಢಪಡಿಸಲಾಗಿದೆ.
ಈ ಪ್ರಕರಣವು ವಕೀಲ ಪೂರ್ಣಚಂದ್ರ ನೀಡಿದ ದೂರಿನ ಮೇರೆಗೆ ದಾಖಲಾಗಿದ್ದ ಎಫ್ಐಆರ್ ಆಧಾರದಲ್ಲಿ ತನಿಖೆಗೆ ಒಳಪಟ್ಟಿತ್ತು. ಈಗ ಚಾರ್ಜ್ಶೀಟ್ ಸಲ್ಲಿಕೆಯಿಂದ ಪ್ರಕರಣ ಮತ್ತೊಂದು ಹಂತಕ್ಕೆ ತಲುಪಿದ್ದು, ಮುಂದಿನ ನ್ಯಾಯಾಂಗ ಪ್ರಕ್ರಿಯೆ ಕುತೂಹಲ ಮೂಡಿಸಿದೆ.
