Ashwaveega News 24×7 ಏಪ್ರಿಲ್ 5 – 2026 : ಬೆಂಗಳೂರು : ಬಿಜೆಪಿಗೆ ಮತ ಹಾಕದಂತೆ ಬೆದರಿಕೆ ಹಾಕಲಾಗಿದೆ ಎಂಬ ಗಂಭೀರ ಆರೋಪ ಬಾಗಲಕೋಟೆಯಲ್ಲಿ ರಾಜಕೀಯ ಸಂಚಲನ ಮೂಡಿಸಿದೆ. ಈ ಸಂಬಂಧ ವಿಪಕ್ಷ ನಾಯಕ R Ashoka ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಪ್ರಕರಣಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಡಿಸಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅಶೋಕ್, ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಬಿಜೆಪಿ ಶಾಲು ಹಾಕಿಕೊಂಡು ಕಾಂಗ್ರೆಸ್ನವರು ಧಮ್ಕಿ ಹಾಕ್ತಾರೆ. NSUI ಕಾರ್ಯಕರ್ತರಿಗೆ ನಾಚಿಕೆ ಆಗಬೇಕು” ಎಂದು ಕಿಡಿಕಾರಿದರು .
ಕರಪತ್ರ ಹಿಡಿದು ಸುಮಾರು 18 ಜನರ ತಂಡ ಕ್ಯಾಂಪಸ್ಗೆ ಪ್ರವೇಶಿಸಿ, ಕೇಸರಿ ಶಾಲು ಧರಿಸಿ ಸರ್ಕಾರಿ ವಾಹನದಲ್ಲಿ ಎಂಟ್ರಿ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. “ಬಿಜೆಪಿಗೆ ವೋಟ್ ಹಾಕಿದ್ರೆ ಜೈಲು ಫಿಕ್ಸ್” ಎಂಬ ಬೆದರಿಕೆ ಕರಪತ್ರದಲ್ಲಿ ಉಲ್ಲೇಖವಾಗಿರುವುದಕ್ಕೂ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
“ಗೆಲ್ಲೋಕೆ ವಾಮಮಾರ್ಗ ಹಿಡಿದಿದ್ದಾರೆ… ಇದು ನಾಚಿಕೆಯ ಸಂಗತಿ” ಎಂದು ಕಾಂಗ್ರೆಸ್ ವಿರುದ್ಧ ಆರೋಪಿಸಿದರು. ಅಲ್ಲದೇ, ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನವರ ಕೈವಾಡ ಇರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿದರು.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 7 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಉಳಿದ 11 ಮಂದಿಯನ್ನು ಕೂಡ ಬಂಧಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ .
