Ashwaveega News 24×7 ಫೆಬ್ರವರಿ 03 -2026 – ಗುಜರಾತ್ : ನಾಯಿಯಂತೆ ಬೊಗಳುವುದು, ಕಚ್ಚಲು ಯತ್ನಿಸುವುದು, ಬೀದಿ ಬೀದಿಗಳಲ್ಲಿ ಓಡಾಡುವುದು – ಇಂತಹ ಅತೀವ ವಿಚಿತ್ರ ವರ್ತನೆಯಿಂದ ಯುವಕನೊಬ್ಬ ಗ್ರಾಮಸ್ಥರಲ್ಲಿ ಭೀತಿಯನ್ನುಂಟು ಮಾಡಿದ ಘಟನೆ ಗುಜರಾತ್ನ ಬನಸ್ಕಾಂತ ಜಿಲ್ಲೆಯ ನರಸಾಲ್ ಗ್ರಾಮದಲ್ಲಿ ನಡೆದಿದೆ .
27 ವರ್ಷದ ದೇವ್ ಡುಂಗ್ರಿ ಎಂಬ ಯುವಕ ಮೂರು ತಿಂಗಳ ಹಿಂದೆ ನಾಯಿ ಕಡಿತಕ್ಕೆ ಒಳಗಾಗಿದ್ದ. ಬಳಿಕ ಅಗತ್ಯ ಚಿಕಿತ್ಸೆ ಸಂಪೂರ್ಣವಾಗಿ ಪಡೆದಿರಲಿಲ್ಲ ಅಂತೆ , ಇದೀಗ ಆತನಲ್ಲಿ ರೇಬೀಸ್ ವೈರಸ್ ಸೋಂಕಿನ ತೀವ್ರ ಲಕ್ಷಣಗಳು ಕಾಣಿಸಿಕೊಂಡಿವೆ ಎಂಬ ಶಂಕೆ ವ್ಯಕ್ತವಾಗಿದೆ .
ಇತ್ತೀಚಿನ ದಿನಗಳಲ್ಲಿ ಯುವಕನು ನಾಯಿಯಂತೆಯೇ ಅರಚುತ್ತಾ, ಬೊಗಳುತ್ತಾ, ಜನರ ಮೇಲೆ ದಾಳಿ ಮಾಡಲು ಯತ್ನಿಸುತ್ತಾ, ಕಚ್ಚಲು ಮುಂದಾಗುತ್ತಿದ್ದಾನೆ. ಈ ವಿಚಿತ್ರ ವರ್ತನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ .
ಯುವಕನನ್ನು ಕೊಠಡಿಯಲ್ಲಿ ಕೂಡಿ ಹಾಕಲು ಪ್ರಯತ್ನಿಸಿದರೂ ಆತ ನಿಯಂತ್ರಣಕ್ಕೆ ಸಿಗದೇ ಹಿಂಸಾತ್ಮಕವಾಗಿ ವರ್ತಿಸಿದ್ದಾನೆ . ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಕರೆಸಿದ್ದಾರೆ .
ಅರಣ್ಯ ಸಿಬ್ಬಂದಿ ಸಹಾಯದಿಂದ ಯುವಕನಿಗೆ ತಾತ್ಕಾಲಿಕ ಔಷಧ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಯುವಕನ ಸ್ಥಿತಿಯನ್ನು ನಿಗಾ ವಹಿಸಿ ಪರಿಶೀಲಿಸುತ್ತಿದ್ದಾರೆ. ನಾಯಿ ಕಡಿತದ ಬಳಿಕ ತಕ್ಷಣ ಹಾಗೂ ಪೂರ್ಣ ಪ್ರಮಾಣದ ಚಿಕಿತ್ಸೆಯ ಅಗತ್ಯ ಎಷ್ಟರ ಮಟ್ಟಿಗೆ ಮಹತ್ವದ್ದೆಂಬುದಕ್ಕೆ ಈ ಘಟನೆ ಎಚ್ಚರಿಕೆಯಂತಿದೆ. ಆರೋಗ್ಯ ಇಲಾಖೆ ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದು, ಸಾರ್ವಜನಿಕರು ಯಾವುದೇ ರೀತಿಯ ಭಯಭೀತಿಗೆ ಒಳಗಾಗದೇ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದೆ .
