Ashwaveega News 24×7 ಏಪ್ರಿಲ್ 5 – 2026 : ಬೆಂಗಳೂರು : “ಹಿಂದೂ ಹುಲಿ” ಎಂದೇ ಖ್ಯಾತರಾದ ಶಾಸಕ Basangouda Patil Yatnal ಅವರು ಮತ್ತೆ ಬಿಜೆಪಿಗೆ ವಾಪಸ್ಸಾಗುವ ಸಾಧ್ಯತೆ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಜೋರಾಗಿದೆ. ಈ ನಡುವೆ ರೆಬೆಲ್ ನಾಯಕ Ramesh Jarkiholi ಮಹತ್ವದ ಹೇಳಿಕೆ ನೀಡಿ ಕುತೂಹಲ ಹೆಚ್ಚಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಜಾರಕಿಹೊಳಿ, ಯತ್ನಾಳ್ ಅವರನ್ನು ಮತ್ತೆ ಬಿಜೆಪಿಗೆ ಕರೆತರುವ ಪ್ರಯತ್ನವನ್ನು ಮೊದಲಿನಿಂದಲೇ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. “ಯತ್ನಾಳ್ ಮರಳಿ ಪಕ್ಷಕ್ಕೆ ಬಂದರೆ ಅದು ಬಿಜೆಪಿಗೆ ಒಳ್ಳೆಯದು” ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಆದರೆ ಅಂತಿಮ ನಿರ್ಧಾರ ಪಕ್ಷದ ಹೈಕಮಾಂಡ್ ಕೈಯಲ್ಲಿದೆ ಎಂದು ಹೇಳಿದ ಅವರು, “ಪಕ್ಷ ಏನು ತೀರ್ಮಾನ ಮಾಡುತ್ತೆ ನೋಡೋಣ” ಎಂದಿದ್ದಾರೆ.
ಯತ್ನಾಳ್ ಈಗಾಗಲೇ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿರುವುದು ಸಕಾರಾತ್ಮಕ ಬೆಳವಣಿಗೆ ಎಂದು ಹೇಳಿದ ಜಾರಕಿಹೊಳಿ, “ಬಸನಗೌಡ ಅವರು ಮಾತನಾಡುವಾಗ ಇತಿಮಿತಿ ಒಳಗೆ ಇರಬೇಕು” ಎಂದು ಸಲಹೆ ನೀಡಿದ್ದಾರೆ.
ಇದೇ ವೇಳೆ, ತಾವು ಸಹ ಉಪಚುನಾವಣೆ ಪ್ರಚಾರದಲ್ಲಿ ಭಾಗವಹಿಸಲು ಪಕ್ಷ ಸೂಚನೆ ನೀಡಿದೆ ಎಂದು ತಿಳಿಸಿದ ಅವರು, ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಹೋಗುವುದಾಗಿ ಹೇಳಿದ್ದಾರೆ.
