Ashwaveega News 24×7 ಮಾರ್ಚ್ 11 – 2026 : ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಅವಹೇಳನ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ . ಪ್ರಕರಣದ ವಿಚಾರಣೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯಕ್ಕೆ ಬಂದು ಸಾಕ್ಷಿ ನೀಡಲಿದ್ದಾರೆ .
ಈ ಪ್ರಕರಣವು ಬೆಂಗಳೂರು ನಗರದ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅಶ್ಲೀಲವಾಗಿ ನಿಂದನೆ ಮಾಡಲಾಗಿದೆ ಎಂದು ರಮ್ಯಾ ದೂರು ನೀಡಿದ್ದರು. ದೂರು ಆಧಾರದಲ್ಲಿ ಪೊಲೀಸರು ತನಿಖೆ ನಡೆಸಿ 12 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದರು .
ಪೊಲೀಸ್ ತನಿಖೆ ಬಳಿಕ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸೆಷನ್ಸ್ ಕೋರ್ಟ್ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡಿದ್ದು, ಆರೋಪಿಗಳ ವಿರುದ್ಧ ಚಾರ್ಜ್ಫ್ರೇಮ್ ಮಾಡಲಾಗಿದೆ .
ಇಂದು ಪ್ರಕರಣದ ಟ್ರಯಲ್ ಅಧಿಕೃತವಾಗಿ ಆರಂಭವಾಗಿದ್ದು, ದೂರುದಾರೆ ರಮ್ಯಾ ಅವರನ್ನು ಮೊದಲ ಸಾಕ್ಷಿಯಾಗಿ ಪರಿಗಣಿಸಲಾಗಿದೆ. ನ್ಯಾಯಾಲಯದಿಂದ ಸಮನ್ಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಅವರು ಕೋರ್ಟ್ಗೆ ಹಾಜರಾಗಿದ್ದಾರೆ .
ವಿಚಾರಣೆ ವೇಳೆ ರಮ್ಯಾ ಕಟಕಟೆಯಲ್ಲಿ ನಿಂತು ತಮ್ಮ ಮೇಲೆ ನಡೆದಿದ್ದ ಅವಹೇಳನ ಮತ್ತು ಅಶ್ಲೀಲ ಸಂದೇಶಗಳ ಕುರಿತು ಸಾಕ್ಷ್ಯ ನೀಡಲಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಗಳು ಕೂಡ ಮುಂದಿನ ದಿನಗಳಲ್ಲಿ ನಡೆಯಲಿವೆ. ಈ ಪ್ರಕರಣವು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ವಿರುದ್ಧ ನಡೆಯುವ ಅವಹೇಳನಕಾರಿ ವರ್ತನೆ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದ್ದು, ನ್ಯಾಯಾಲಯದ ತೀರ್ಪಿನತ್ತ ಎಲ್ಲರ ಗಮನ ನೆಟ್ಟಿದೆ .
