
ಅಣ್ಣಾಮಲೈ, ತಮಿಳುನಾಡು ರಾಜಕೀಯದಲ್ಲಿ ಸಾಕಷ್ಟು ಸದ್ದುಮಾಡಿದ್ದ ಹೆಸರು. ದ್ರಾವಿಡನಾಡಿನಲ್ಲಿ ಕೇಸರಿ ಪಕ್ಷವನ್ನು ಅಧಿಕಾರಕ್ಕೆ ತಂದೇ ತರುತ್ತೇನೆ ಎಂದು ಹೊರಟಿದ್ದ ನಾಯಕ, ಕರ್ನಾಟಕದ ಮಾಜಿ IPS ಅಧಿಕಾರಿ ಹಾಗೂ ಈಗಿನ ತಮಿಳುನಾಡು ಬಿಜೆಪಿಯ ರಾಜ್ಯಾಧ್ಯಕ್ಷ. ತನ್ನ ಸಿದ್ಧಾಂತದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಲು ತಯಾರಿಲ್ಲದ ಡೈನಾಮಿಕ್ ನಾಯಕ ಅಂತಲೇ ಫೇಮಸ್ ಈ ಅಣ್ಣಾಮಲೈ. ಆದರೆ ಇಂತಹ ಡೈನಾಮಿಕ್ ನಾಯಕನಿಗೆ ದ್ರಾವಿಡ ರಾಜಕೀಯದ ನೆಲ ತಮಿಳುನಾಡಿನಲ್ಲಿ, ಹೇಳಿಕೊಳ್ಳುವಂತಹ ರಾಜಕೀಯ ಯಶಸ್ಸು ದಕ್ಕಲಿಲ್ಲ. ಇದೇ ಕಾರಣಕ್ಕೆ ,ಈಗ ತಮಿಳುನಾಡು ಬಿಜೆಪಿಯಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. 2023ರ ವಿಧಾನಸಭಾ ಚುನಾವಣೆಯಲ್ಲಿ, ಪರಸ್ಪರ ವೈಮನಸ್ಸಿನಿಂದ ದೂರಾಗಿದ್ದ ಬಿಜೆಪಿ ಹಾಗೂ AIADMK ಪಕ್ಷಗಳು ಮತ್ತೆ ಕೈಜೋಡಿಸುವ ಲಕ್ಷಣಗಳು ಕಾಣುತ್ತಿವೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಜೊತೆಗಿನ ಭಿನ್ನಾಭಿಪ್ರಾಯದ ಕಾರಣಕ್ಕೆ, 2023ರಲ್ಲಿ AIADMK ಪಕ್ಷ, NDA ಮೈತ್ರಿಕೂಟದಿಂದ ಹೊರಬಂದಿತ್ತು. ಇದು 2024 ರ ಲೋಕಸಭಾ ಚುನಾವಣೆಯಲ್ಲಿ ಮತ ವಿಭಜನೆಗೂ ಕಾರಣವಾಗಿ, 2024ರ ಲೋಕಸಭಾ ಚುನಾವಣೆಯಲ್ಲಿ ಅನಾಯಾಸವಾಗಿ DMK ಪಕ್ಷ ಅತಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿತ್ತು. ಸ್ವತಃ ಅಣ್ಣಾಮಲೈ ಕೊಯಮತ್ತೂರು ಕ್ಷೇತ್ರದಲ್ಲಿ ಸೋಲನುಭವಿಸಿದ್ದರು. ಪ್ರತಿ ಲೋಕಸಭಾ ಚುನಾವಣೆಯಲ್ಲಿ ಕನ್ಯಾಕುಮಾರಿ ಕ್ಷೇತ್ರದ ಜೊತೆಗೆ ಕನಿಷ್ಠ ಇನ್ನೊಂದು ಕ್ಷೇತ್ರದಲ್ಲಿ ಜಯಗಳಿಸುತ್ತಿದ್ದ ಬಿಜೆಪಿಗೆ, 2024ರ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ಪಕ್ಷ ಒಂದು ಕ್ಷೇತ್ರವನ್ನೂ ಗೆಲ್ಲಲೂ ಸಾಧ್ಯವಾಗಲಿಲ್ಲ. ಬಿಜೆಪಿಯ ಮತಗಳಿಕೆಯ ಪ್ರಮಾಣ 11%ಗೆ ಏರಿಕೆಯಾಯ್ತಾದರೂ, ಅದ್ಯಾವುದೂ ಸೀಟುಗಳಾಗಿ ಪರಿವರ್ತನೆ ಹೊಂದಲಿಲ್ಲ. ಬಿಜೆಪಿ ಹಾಗೂ AIADMK ಮೈತ್ರಿಯಿಂದ ಹೊರತಾಗಿ ಏಕಾಂಗಿಯಾಗಿ ಸ್ಪರ್ಧಿಸಿದ್ದರಿಂದ, ಈ ರೀತಿಯ ಫಲಿತಾಂಶ ಸಿಕ್ಕಿತ್ತು..!

2021ರ ತಮಿಳುನಾಡು ವಿದಾನಸಭಾ ಚುನಾವಣೆಯಲ್ಲಿ ಯಾವುದೇ ರಾಜಕೀಯ ಅನುಭವವಿಲ್ಲದ ಕೆ.ಅಣ್ಣಾಮಲೈ, ಅರವಕುರಿಚಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಆದರೆ ಅಣ್ಣಾಮಲೈ ಹೋರಾಟದ ಮನೋಭಾವ ಗಮನಿಸಿದ ಬಿಜೆಪಿ ಹೈಕಮಾಂಡ್, ಅಣ್ಣಾಮಲೈಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿ ಪುರಸ್ಕರಿಸಿತ್ತು. ತಮಿಳುನಾಡಿನಲ್ಲಿ ತಾನು ಬಿಜೆಪಿ ಸಂಘಟನೆ ಮಾಡೋದಾಗಿ ಅಣ್ಣಾಮಲೈ ಬಿಜೆಪಿ ಹೈಕಮಾಂಡ್ʼಗೆ ಮಾತುಕೊಟ್ಟಿದ್ರು. ಅಣ್ಣಾಮಲೈ ಮೇಲೆ ಭರವಸೆಯಿಟ್ಟಿದ್ದ ಹೈಕಮಾಂಡ್, ಅವರಿಗೆ ತಮಿಳುನಾಡು ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನವನ್ನೇ ನೀಡಿತ್ತು. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಬಳಿಕ, ಅಣ್ಣಾಮಲೈ ಪಕ್ಷ ಸಂಘಟನೆಯನ್ನು ಚುರುಕುಗೊಳಿಸಿದ್ರು. ಆಕ್ರಾಮಕವಾಗಿ ರಾಜಕೀಯ ಮಾಡುತ್ತಿದ್ದ ಅಣ್ಣಾಮಲೈಗೆ ಹಲವು ರೀತಿಯ ಬೆದರಿಕೆಗಳೂ ಬರತೊಡಗಿದವು. ಯಾವಾಗ ಅಣ್ಣಾಮಲೈ ಜೀವಕ್ಕೆ ಅಪಾಯವಿದೆ ಎಂಬ ವಿಷಯದ ಅರಿವಾಯ್ತೋ, ಆಗ ಅವರಿಗೆ ʼZʼ ಸೆಕ್ಯೂರಿಟಿಯನ್ನೂ ನೀಡಿತ್ತು ಕೇಂದ್ರ ಗೃಹ ಇಲಾಖೆ. ಮೊದಮೊದಲು ಮಿತ್ರಪಕ್ಷಗಲಾದ ಬಿಜೆಪಿ ಹಾಗೂ AIADMK ನಡುವೆ ಎಲ್ಲವೂ ಚೆನ್ನಾಗೇ ಇತ್ತು. ಜಯಲಲಿತಾ ನಿಧನದ ಬಳಿಕ, AIADMKಗೆ ಒಂದು ಸದೃಢ ನಾಯಕತ್ವದ ಕೊರತೆ ಕಾಡುತ್ತಿತ್ತು. ಈ ಸ್ಥಾನವನ್ನ ಅಣ್ಣಾಮಲೈ ಮೈತ್ರಿ ರೂಪದಲ್ಲಿ ತುಂಬಬಹುದು ಎಂಬುದು ಹಲವರ ಅಭಿಮತವಾಗಿತ್ತು. ಆದರೆ ಅಣ್ಣಾಮಲೈ ಮನಸ್ಸಿನಲ್ಲಿ ಬೇರೆಯದೇ ಆಲೋಚನೆಯಿತ್ತು. ಯಾರ ಹಂಗೂ ಇಲ್ಲದೇ, ಬಿಜೆಪಿ ತಮಿಳುನಾಡಿನಲ್ಲಿ ಸ್ವತಂತ್ರವಾಗಿ ಬೆಳೆಯಬೇಕು ಅನ್ನೋದು ಅಣ್ಣಾಮಲೈ ಹಂಬಲವಾಗಿತ್ತು. ಅದಕ್ಕಾಗಿ ಅವರು AIADMK ತಮ್ಮ ಮಿತ್ರ ಪಕ್ಷ ಅನ್ನೋದನ್ನೂ ನೋಡದೇ, AIADMK ನಾಯಕಿ ಜಯಲಲಿತಾ ಸೇರಿದಂತೆ ಅನೇಕ ನಾಯಕರರ ಬಗ್ಗೆ ಹೇಳಿಕೆ ನೀಡತೊಡಗಿದರು. ಇದು ಅಣ್ಣಾಮಲೈ ಹಾಗೂ AIADMK ನಾಯಕರ ಮಧ್ಯೆ ಮುನಿಸಿಗೆ ಕಾರಣವಾಗಿ, 2023ರಲ್ಲಿ AIADMK ಪಕ್ಷ NDA ಮೈತ್ರಿಕೂಟದಿಂದ ಹೊರಬಂತು..!
AIADMK ಹಾಗೂ ಬಿಜೆಪಿಯ ಮೈತ್ರಿ ಮುರಿಯುವಿಕೆಗೆ ಅಣ್ಣಾಮಲೈ ಪ್ರಮುಖ ಕಾರಣವಾಗಿದ್ದರು. AIADMKಯ ಜಯಲಲಿತಾ ಸೇರಿದಂತೆ, ಹಲವು ನಾಯಕರ ಬಗ್ಗೆ ಅಣ್ಣಾಮಲೈ ಪದೇ ಪದೇ ನೀಡುತ್ತಿದ್ದ ಹೇಳಿಕೆ, AIADMK ನಾಯಕರಿಗೆ ಸುತಾರಾಂ ಇಷ್ಟವಾಗುತ್ತಿರಲಿಲ್ಲ. ಅಣ್ಣಾಮಲೈ ಹೇಳಿಕೆಗಳಿಗೆ ಕಡಿವಾಣ ಹಾಕಿ ಎನ್ನುವುದು AIADMK ನಾಯಕರ ಆಗ್ರಹವಾಗಿತ್ತು. ಆದರೆ ಅಣ್ಣಾಮಲೈ ನಿಯಂತ್ರಿಸೋದು ಯಾರಿಂದಲೂ ಸಾಧ್ಯವಾಗಲಿಲ್ಲ. ಹಾಗಾಗಿ ಅಣ್ಣಾಮಲೈ ನಡವಳಿಕೆಯಿಂದ ಬೇಸತ್ತ AIADMK ನಾಯಕರು, ಸಭೆ ನಡೆಸಿ ತಾವು NDA ಮೈತ್ರಿಕೂಟದಿಂದ ಹೊರಬರುತ್ತಿರುವುದಾಗಿ ಘೋಷೊಸಿದ್ರು. ಅಸಲಿಗೆ ಅಣ್ಣಾಮಲೈಗೂ ಇದೇ ಬೇಕಾಗಿತ್ತು. AIADMKಯ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸೋದು ಅಣ್ಣಾಮಲೈಗೆ ಒಂದಿನಿತೂ ಇಷ್ಟವಿರಲಿಲ್ಲ. ಇದರಿಂದ ಬಿಜೆಪಿ ಸ್ವತಂತ್ರವಾಗಿ ತಮಿಳುನಾಡಿನಲ್ಲಿ ಬೆಳೆಯಲು ಸಾಧ್ಯವಿಲ್ಲ, ನಾವು ಯಾವಾಗಲೂ ಇತರರ ಮೇಲೆಯೇ ಅವಲಂಬನೆಯಾಗಿರಬೇಕಾಗುತ್ತದೆ ಅನ್ನೋದು ಅಣ್ಣಾಮಲೈ ವಾದವಾಗಿತ್ತು. ಬಿಜೆಪಿ ತಮಿಳುನಾಡಿನಲ್ಲಿ ಸ್ವತಂತ್ರವಾಗಿ ಬೆಳೆಯಬೇಕಾದ್ರೆ, ನಾವು AIADMK ಮೈತ್ರಿಯಿಂದ ಹೊರಬರಬೇಕು, ತಮಿಳುನಾಡಿನಲ್ಲಿರುವ ಇತರ ಸಣ್ಣ ಸಣ್ಣ ಪಕ್ಷಗಲ ಜೊತೆ ಮೀತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸಬೇಕು ಎನ್ನುವುದು ಅಣ್ಣಾಮಲೈ ವಾದವಾಗಿತ್ತು. ಇದನ್ನು ಬಿಜೆಪಿ ಹೈಕಮಾಂಡ್ʼಗೂ ಮನವರಿಕೆ ಮಾಡಿಕೊಟ್ಟಿದ್ದರು ಅಣ್ಣಾಮಲೈ. ಅಣ್ಣಾಮಲೈ ಮೇಲೆ ನಂಬಿಕೆ ಹೊಂದಿದ್ದ ಬಿಜೆಪಿ ಹೈಕಮಾಂಡ್, ಈ ಬೇಡಿಕೆಗೆ ಅಸ್ತು ಅಂದಿತ್ತು. ಅಲ್ಲಿಗೆ ಬಿಜೆಪಿ ಹಾಗೂ AIADMKಯ ಮೈತ್ರಿ ಅಧಿಕೃತವಾಗಿ ಮುರಿದುಬಿದ್ದಿತ್ತು. ಆದರೆ ದ್ರಾವಿಡ ರಾಜಕೀಯ ನೆಲದಲ್ಲಿ ಬಿಜೆಪಿಯ ಕಾರ್ಯತಂತ್ರ ಯಶಸ್ವಿಯಾಗಲಿಲ್ಲ, ಅಂದುಕೊಂಡ ಯಾವುದೇ ಯಶಸ್ಸು ಬಿಜೆಪಿಗೆ ಲೋಕಸಭಾ ವಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಸಿಗಲಿಲ್ಲ..!
ಯಾವಾಗ ಲೋಕಸಭೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ವೋ ಆಗ ಅಣ್ಣಾಮಲೈ ಮೇಲೆ ಕೆಲ ಬಿಜೆಪಿ ಹಾಗೂ AIADMK ನಾಯಕರು ಬಹಿರಂಗವಾಗಿ ಅಸಮಾದಾನ ಹೊರಹಾಕಲು ಶುರುಮಾಡಿದರು. ಕಾರಣ ಲೋಕಸಬಾ ಚುನಾವಣೆಯಲ್ಲಿ DMK 46% ಮತ ಪಡೆದರೆ, ಬಿಜೆಪಿ 18% ಮತ ಹಾಗೂ AIADMK ಪಕ್ಷ 23% ಪಡೆದಿದ್ದವು. ಬಿಜೆಪಿ ಹಾಗೂ AIADMK ಒಟ್ಟಾಗಿ ಚುನಾವಣೆಗೆ ಹೋಗಿದ್ದಿದ್ದರೆ, ನಾವು DMKಗೆ ಪೈಪೋಟಿ ನೀಡಿ ಒಂದಷಟು ಸ್ಥಾನಗಳನ್ನ ಪಡೆಯಬಹುದಾಗಿತ್ತು. ಆದರೆ ಅಣ್ಣಾಮಲೈ ಹಠಮಾರಿತನದ ಕಾರಣಕ್ಕೆ ನಾವು ಗೆಲ್ಲಬಹುದಾಗಿದ್ದ ಕ್ಷೇತ್ರಗಳನ್ನೂ ಕಳೆದುಕೊಂಡೆವು. ಹಾಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಅಣ್ಣಾಮಲೈ ಬದಲಾಯಿಸಿ ಎನ್ನುವುದು ಬಿಜೆಪಿ ಹಾಗೂ ಕೆಲ AIADMK ನಾಯಕರ ಅಭಿಪ್ರಾಯವಾಗಿತ್ತು. ಆ ಬೇಡಿಕೆ ಈಗ ಈಡೇರುವ ಕಾಲ ಸನ್ನಿಹಿತವಾಗುತ್ತಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ AIADMK ಜೊತೆ ಮೈತ್ರಿಯಿಲ್ಲದೇ ಏಕಾಂಗಿಯಾಗಿ ಸ್ಪರ್ಧೀಸಿ ಬಿಜೆಪಿ ಸೋತಿತ್ತು. ಮುಂದಿನ ವರ್ಷ ಅಂದರೆ 2026ರಲ್ಲಿ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಯಿದೆ. ಲೋಕಸಭಾ ಚುನಾವಣೆಯಲ್ಲಿ ಮಾಡಿದ ತಪ್ಪನ್ನೇ ಮತ್ತೆ ಪುನರಾವರ್ತಿಸಲು ಬಿಜೆಪಿ ಹೈಕಮಾಂಡ್ ಸಿದ್ಧವಿಲ್ಲ. ಅಣ್ಣಾಮಲೈ ಕಠಿಣ ನಿಲುವಿಗೆ ಅಂಟಿಕೊಳ್ಳದೇ AIADMK ಜೊತೆ ಮೈತ್ರಿ ಮಾಡಿಕೊಂಡಲ್ಲಿ, DMKಗೆ ಪೈಪೋಟಿ ನೀಡಿ, ಅವರು ಪುನಃ ಅಧಿಕಾರಕ್ಕೆ ಬರದಂತೆ ತಡೆಯಬಹುದು ಎಂಬುದು ಬಿಜೆಪಿ ಹೈಕಮಾಂಡ್ ಅಭಿಪ್ರಾಯ. ಇದಕ್ಕೆ ಇಂಬು ನೀಡುವಂತೆ, ಯಾವಾಗ ತಮಿಳುನಾಡು AIADMK ಪ್ರಧಾನ ಕಾರ್ಯದರ್ಶಿ ಇ.ಪಳನಿಸ್ವಾಮಿ, ಕೇಂದ್ರ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿ ಮೈತ್ರಿಯ ಕುರಿತು ಚರ್ಚಿಸಿದರೋ, ಅಲ್ಲಿಂದೀಚೆಗೆ ಅಣ್ಣಾಮಲೈರನ್ನು ತಮಿಳುನಾಡು ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾಯಿಸಬೇಕು ಅನ್ನೋದಕ್ಕೆ ಪೂರಕ ಬೆಳವಣಿಗೆಗಳ ನಡೆಯುತ್ತಿವೆ..
AIADMKಯ ಪ್ರಧಾನ ಕಾರ್ಯದರ್ಶಿ ಹಾಗೂ ಅಮಿತ್ ಶಾ ದೆಹಲಿಯಲ್ಲಿ ಭೇಟಿಯಾಗಿ ಮೈತ್ರಿಯಲ್ಲಿ ಚರ್ಚಿಸಿದ್ದಾರೆ. ಈ ವೇಳೆ ಬಿಜೆಪಿಯ ಜೊತೆಗಿನ ಮೈತ್ರಿಗೆ ತಾನು ಸಿದ್ಧ ಎಂದಿರುವ AIADMK, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಅಣ್ಣಾಮಲೈ ಬದಲಾಯಿಸಿ ಎಂಬ ಏಕೈಕ ಶರತ್ತು ಮುಂದಿಟ್ಟಿದೆ ಎನ್ನಲಾಗಿದೆ. ಇದಕ್ಕೆ ಅಮಿತ್ ಶಾ ಸಹ ಪೂರಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗ್ತಿದೆ. ಇದೇ ವಿಷಯವನ್ನು ಅಣ್ಣಾಮಲೈಗೂ ತಿಳಿಸಿರುವ ಅಮಿತ್ ಶಾ ರಾಜೀನಾಮೆಗೆ ಸಿದ್ಧರಾಗುವಂತೆಯೂ ತಿಳಿಸಿದ್ದಾರೆ ಎನ್ನಲಾಗಿದೆ. ಈ ಬ್ಗಗೆ ಪ್ರತಿಕ್ರಿಯಿಸಿರುವ ಅಣ್ಣಾಮಲೈ, ಪಕ್ಷದ ರಾಷ್ಟ್ರೀಯ ನಾಯಕರ ತೀರ್ಮಾನವೇ ಅಂತಿಮ. ತಾನು ಸಾಮಾನ್ಯ ಕಾರ್ಯಕರ್ತನಾಗಿ ದುಡಿಯಲೂ ಸಿದ್ಧ ಎಂದಿದ್ದಾರೆ. ಅಲ್ಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಅಣ್ಣಾಮಲೈ ಕೆಳಗಿಳಿಯುವುದು, ಬಹುತೇಕ ಖಚಿತ ಎನ್ನಲಾಗ್ತಿದೆ. ಕೆ. ಅಣ್ಣಾಮಲೈ ಹಾಗೂ ಇ.ಪಳನಿಸ್ವಾಮಿ ಇಬ್ಬರೂ ಗೌಂಡರ್ ಸಮುದಾಯಕ್ಕೆ ಸೇರಿರುವುದರಿಂದ, ಬೇರೊಬ್ಬ ಸ,ಮುದಾಯದ ವ್ಯಕ್ತಿಯನ್ನು, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಿಸಲಾಗುತ್ತದೆ ಎನ್ನುವ ಮಾತುಗಳೂ ಕೇಳಿಬರ್ತಿವೆ. ಒಟ್ಟಿನಲ್ಲಿ ತಮಿಳುನಾಡಿನಲ್ಲಿ ಬಿಜೆಪಿಗೆ ಭರವಸೆ ಮೂಡಿಸಿದ್ದ ಅಣ್ಣಾಮಲೈ, ರಾಜ್ಯಾಧ್ಯಕ್ಷ ಸ್ಥಾನದಿಂದ ನಿರ್ಗಮಿಸುತ್ತಿರುವುದು, ಪಕ್ಷಕ್ಕೆ ವರವಾಗುತ್ತಾ ಅಥವಾ ಶಾಪವಾಗುತ್ತಾ ಎನ್ನುವುದು, ಮುಂದಿನ ದಿನಗಳಲ್ಲಿ ತಿಳಿದುಬರಲಿದೆ..!