Ashwaveega News 24×7 ಫೆಬ್ರವರಿ 07 -2026 – ಬೆಂಗಳೂರು : ಕೃಷಿ ಚಟುವಟಿಕೆಗಾಗಿ ಚಿನ್ನ ಅಡವಿಟ್ಟು ಸಾಲ ಪಡೆದ ಅನ್ನದಾತರಿಗೆ ದಿಢೀರ್ ದೊಡ್ಡ ಶಾಕ್ ಎದುರಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹೊಸ ಮಾರ್ಗಸೂಚಿ ಜಾರಿಗೊಳಿಸಿದ ಬೆನ್ನಲ್ಲೇ ಬ್ಯಾಂಕ್ಗಳು ತಮ್ಮ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿದ್ದು, ರೈತರಲ್ಲಿ ಭಾರೀ ಆತಂಕ ಮೂಡಿಸಿದೆ.
ಈವರೆಗೆ ವರ್ಷಕ್ಕೊಮ್ಮೆ ಬಡ್ಡಿ ಕಟ್ಟಿದರೆ ಸಾಕು ಎನ್ನುವ ವ್ಯವಸ್ಥೆ ಇತ್ತು. ಆದರೆ ಇದೀಗ ಬಡ್ಡಿಯ ಜೊತೆಗೆ ಅಸಲು ಹಣವನ್ನೂ ಕಟ್ಟಲೇಬೇಕು ಎಂದು ಬ್ಯಾಂಕ್ಗಳು ನೋಟಿಸ್ ನೀಡುತ್ತಿವೆ. ಹೊಸ ಮಾರ್ಗಸೂಚಿ ನೆಪದಲ್ಲಿ ಬ್ಯಾಂಕ್ ಸಿಬ್ಬಂದಿ ರೈತರಿಗೆ ಟಾರ್ಚರ್ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಬಡ್ಡಿ ಹಾಗೂ ಅಸಲು ಹಣ ಕಟ್ಟದಿದ್ದರೆ ಅಂತಹ ಸಾಲಗಳನ್ನು NPA ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಬ್ಯಾಂಕ್ಗಳಿಂದ ಎಚ್ಚರಿಕೆ ನೀಡಲಾಗಿದೆ. ನೀವು ಅಡವಿಟ್ಟ ಬಂಗಾರವನ್ನು ಹರಾಜಿಗೆ ಹಾಕಲಾಗುತ್ತದೆ ಎಂಬ ನೋಟಿಸ್ಗಳು ಅನ್ನದಾತರಿಗೆ ಶಾಕ್ ನೀಡಿವೆ.
“ಬಂಗಾರ ಹರಾಜಾದರೆ ಹಣ ಮಾತ್ರವಲ್ಲ, ನಮ್ಮ ಮಾನವೂ ಹೋಗುತ್ತದೆ” ಎಂದು ರೈತರು ನೋವು ವ್ಯಕ್ತಪಡಿಸುತ್ತಿದ್ದಾರೆ. ಬ್ಯಾಂಕ್ಗಳ ನೋಟಿಸ್ನಲ್ಲಿ ಮೊದಲು ಬಡ್ಡಿ ಜೊತೆಗೆ ಅಸಲು ಕಟ್ಟಿ, ನಂತರ ಬೇಕಾದರೆ ಸಾಲ ರಿನೀವಲ್ ಮಾಡಿಕೊಳ್ಳಿ ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.
ಒಮ್ಮೆ ಬೆಳೆ ಕೈಗೆ ಸಿಗುತ್ತದೆ, ಇನ್ನೊಮ್ಮೆ ಸಿಗುವುದಿಲ್ಲ. ಒಮ್ಮೆ ಬೆಲೆ ಇರುತ್ತದೆ, ಇನ್ನೊಮ್ಮೆ ಇಲ್ಲ. ಯಾವಾಗ ಏನು ಆಗುತ್ತದೆ ಎಂದು ಹೇಳಲಾಗದ ಅನಿಶ್ಚಿತ ಸ್ಥಿತಿಯಲ್ಲಿ ಬದುಕುತ್ತಿರುವ ಅನ್ನದಾತರಿಗೆ ಇಂತಹ ಹೊತ್ತಲ್ಲಿ ಬ್ಯಾಂಕ್ಗಳ ಹೊಸ ರೂಲ್ಸ್ ಮತ್ತೊಂದು ಹೊಡೆತವಾಗಿದೆ.
ಬ್ಯಾಂಕ್ಗಳ ಈ ನಡೆಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದ್ಯಾವ ಸೀಮೆ ರೂಲ್ಸ್ ? ರೈತ ಪರ ಯೋಜನೆಗಳು ನಿಜಕ್ಕೂ ಇದೆಯೇ ? ಎಂದು ಪ್ರಶ್ನಿಸುತ್ತಿದ್ದಾರೆ.
