Ashwaveega News 24×7 ಮಾರ್ಚ್ 18– 2026 : ವಿಶ್ವದ ಅತ್ಯಂತ ಜನಪ್ರಿಯ ಮತ್ತು ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಮಾರಾಟ ಪ್ರಕ್ರಿಯೆ ತೀವ್ರ ಚರ್ಚೆಗೆ ಗ್ರಾಸವಾಗಿದೆ .
ಇದೀಗ ಈ ಫ್ರಾಂಚೈಸಿ ಮಾರಾಟದ ಅಂತಿಮ ಹಂತ ತಲುಪಿದ್ದು, ಎರಡು ಪ್ರಮುಖ ಪಕ್ಷಗಳು ಪೈಪೋಟಿಯಲ್ಲಿ ಇರುವುದಾಗಿ ತಿಳಿದುಬಂದಿದೆ. RCB ಮಾರಾಟ ಬೆಲೆ ₹18,496 ಕೋಟಿಗೂ ಮೀರಬಹುದಾದ ಸಾಧ್ಯತೆ ಇದೆ .

ಸ್ವೀಡನ್ ಮೂಲದ ಖಾಸಗಿ ಇಕ್ವಿಟಿ ಸಂಸ್ಥೆ EQT ಗಮನಾರ್ಹ ಬಿಡ್ ಸಲ್ಲಿಸಿದ್ದು , ಪ್ರಮುಖ ಸ್ಪರ್ಧಿಯಾಗಿ ಹೊರಹೊಮ್ಮಿದೆ. ಇನ್ನು ಮಣಿಪಾಲ್ ಆಸ್ಪತ್ರೆ ಸಮೂಹದ ರಂಜನ್ ಪೈ, ಅಮೆರಿಕಾದ ಖಾಸಗಿ ಇಕ್ವಿಟಿ ಸಂಸ್ಥೆ ಕೋಲ್ಬರ್ಗ್ ಕ್ರಾವಿಸ್ ರಾಬರ್ಟ್ಸ್ (KKR) ಹಾಗೂ ಸಿಂಗಾಪುರದ ಹೂಡಿಕೆ ಸಂಸ್ಥೆ Temasek ಕೂಡ ಪ್ರಮುಖ ಬಿಡ್ ದಾರರಾಗಿದ್ದಾರೆ .
ಆರಂಭದಲ್ಲಿ ಹಲವು ಹೂಡಿಕೆದಾರರು ಆಸಕ್ತಿ ತೋರಿದ್ದರೂ, ಹಂತ ಹಂತವಾಗಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಮ್ಯಾಂಚೆಸ್ಟರ್ ಯುನೈಟೆಡ್ ಸಹಮಾಲಿಕರಾದ ಗ್ಲೇಜರ್ ಕುಟುಂಬ ಹಾಗೂ ಉದ್ಯಮಿ ಆಧರ್ ಪೂನಾವಾಲಾ ಕೂಡ ಇದೀಗ ಈ ರೇಸ್ನಲ್ಲಿಲ್ಲವೆಂದು ತಿಳಿದು ಬಂದಿದೆ .
ಮಾರಾಟ ಪ್ರಕ್ರಿಯೆ ಈ ತಿಂಗಳಲ್ಲಿ ಪೂರ್ಣಗೊಂಡರೂ, ಐಪಿಎಲ್ ಪಂದ್ಯಗಳು ಆರಂಭವಾಗಲಿರುವುದರಿಂದ ತಂಡದ ಹೆಸರು ಅಥವಾ ಇತರೆ ಬದಲಾವಣೆಗಳು ತಕ್ಷಣ ಸಾಧ್ಯವಾಗುವುದಿಲ್ಲ. ಹೀಗಾಗಿ ಸಂಪೂರ್ಣ ಹಸ್ತಾಂತರ ಪ್ರಕ್ರಿಯೆ ಮುಗಿಯಲು ಇನ್ನೂ ಕೆಲವು ಕಾಲ ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ .
