Ashwaveega News 24×7 ಜನವರಿ 15 – ಬೆಂಗಳೂರು : ಸಸ್ಯಕಾಶಿ ಲಾಲ್ಬಾಗ್ನಲ್ಲಿ ಗಣರಾಜ್ಯೋತ್ಸವ ಅಂಗವಾಗಿ 219ನೇ ಫ್ಲವರ್ ಶೋ ಪ್ರೇಕ್ಷಕರಿಗೆ ಮುಕ್ತವಾಗಿದ್ದು, ಸಿಟಿ ಮಂದಿಯನ್ನ ಕೈ ಬೀಸಿ ಕರೆಯುತ್ತಿದೆ. ಅಲ್ಲಿನ ಒಂದೊಂದು ಪುಷ್ಪ ತೇಜಸ್ವಿ ಬದುಕಿನ ಕಥೆ ಸಾರೋಕೆ ಸಿದ್ಧವಾಗ್ತಿವೆ. ಜನವರಿ 14 ರಿಂದ 26ರವರೆಗೆ , ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.
ತೋಟಗಾರಿಕೆ ಇಲಾಖೆ ಈ ಬಾರಿ ರಾಷ್ಟ್ರಕವಿ ಕುವೆಂಪು ಅವರ ಪುತ್ರ, ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹ ಕುರಿತ ‘ತೇಜಸ್ವಿ ವಿಸ್ಮಯ’ ವಿಷಯ ಆಧರಿಸಿದ ಈ ಪ್ರದರ್ಶನದಲ್ಲಿ ಗಾಜಿನ ಮನೆಯಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ನೆಚ್ಚಿನ ಕಾಡನ್ನು ನಿರ್ಮಿಸಲಾಗಿದೆ .
ಫಲಪುಷ್ಪ ಪ್ರದರ್ಶನಕ್ಕೆ ತಮಿಳುನಾಡು, ಕೇರಳ, ಮಹಾರಾಷ್ಟ, ಡಾರ್ಜಿಲಿಂಗ್, ವಯನಾಡು ಕಡೆಯಿಂದ ಹೂಗಳು ಬಂದಿದ್ದು, 95ಕ್ಕೂ ಹೆಚ್ಚು ವೈವಿಧ್ಯಮಯ ಹಾಗೂ 35 ಲಕ್ಷಕ್ಕೂ ಹೆಚ್ಚು ಹೂಗಳಿಂದ ಅಲಂಕಾರ ಮಾಡಲಾಗುತ್ತಿದೆ. ಈ ಬಾರಿ ಲಾಲ್ಬಾಗ್ನಲ್ಲಿ ಬೆಳೆದಿರುವ 27 ಲಕ್ಷ ಹೂ ಬಳಕೆ ಮಾಡಲಾಗುತ್ತಿದೆ ಅಂತ ತಿಳಿದು ಬಂದಿದೆ .
ಈ ಕುರಿತು ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಆರ್. ಗಿರೀಶ್, ಈ ಬಾರಿ, ಫಲಪಷ್ಟ ಪ್ರದರ್ಶನಕ್ಕೆ 3.20 ಕೋಟಿ ರೂ.ಗಿಂತ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದ್ದು, ಈ ಬಾರಿ 12 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡುವ ನಿರೀಕ್ಷೆಯಿದೆ.

ತೇಜಸ್ವಿ ಅವರ ಕಾದಂಬರಿ, ಕಥೆಗಳಲ್ಲಿ ಕಂಡು ಬರುವ ಕಾಡಿನ ಮಾದರಿಯನ್ನು ಗಾಜಿನ ಮನೆಯಲ್ಲಿ ನಿರ್ಮಿಸಲಾಗಿದೆ. 45/45 ಅಡಿ ವ್ಯಾಸದ 25 ಅಡಿ ಎತ್ತರದ ಬೃಹತ್ ಬೆಟ್ಟ, ಜಲಪಾತದ ಮಾದರಿ ಇರಲಿದ್ದು ಅದರ ತಪ್ಪಲಿನಲ್ಲಿ ತೇಜಸ್ವಿ ಅವರ ಮೂಡಿಗೆರೆಯ ಹ್ಯಾಂಡ್ಪೋಸ್ಟ್ ಸಮೀಪವಿರುವ ‘ನಿರುತ್ತರ’ ಮನೆಯ ಪುಷ್ಪಮಾದರಿ ನಿರ್ಮಾಣಗೊಳ್ಳಲಿದೆ. ಅದರ ಮುಂದೆ ನಾಲ್ಕು ಅಡಿ ಎತ್ತರದ ತೇಜಸ್ವಿ- ರಾಜೇಶ್ವರಿಯವರ ಪ್ರತಿಮೆಗಳು ಇರಲಿವೆ ಎಂದು ಮಾಹಿತಿ ನೀಡಿದರು.
