Ashwaveega News 24×7 ಮಾರ್ಚ್ 21 – 2026 : ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗಿದ್ದು, ಅಭ್ಯರ್ಥಿಗಳ ಆಸ್ತಿಪಾಸ್ತಿ ವಿವರಗಳು ಇದೀಗ ಬಹಿರಂಗವಾಗಿವೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಸಮರ್ಥ್ ಶಾಮನೂರು ಹಾಗೂ ಬಿಜೆಪಿ ಅಭ್ಯರ್ಥಿ ಟಿ. ಶ್ರೀನಿವಾಸ್ ದಾಸಕರಿಯಪ್ಪ ಅವರ ಆರ್ಥಿಕ ಸ್ಥಿತಿಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಸಮರ್ಥ್ ಶಾಮನೂರು ತಮ್ಮ ನಾಮಪತ್ರದಲ್ಲಿ ಸುಮಾರು ನಾಲ್ಕೂ ಕಾಲು ಕೋಟಿ ರೂಪಾಯಿ ಆಸ್ತಿಯನ್ನು ಘೋಷಿಸಿದ್ದಾರೆ. ಇದರಲ್ಲಿ ಸ್ಥಿರಾಸ್ತಿ ಸುಮಾರು 2.17 ಕೋಟಿ ರೂಪಾಯಿ ಹಾಗೂ ಚರಾಸ್ತಿ ಸುಮಾರು 2.08 ಕೋಟಿ ರೂಪಾಯಿ ಆಗಿದೆ. ಆದರೆ, ಸಮರ್ಥ್ ಹೆಸರಲ್ಲಿ ಸುಮಾರು ಮೂರೂವರೆ ಕೋಟಿ ರೂಪಾಯಿ ಸಾಲವೂ ಇದೆ. ಪ್ರಮುಖವಾಗಿ ತಂದೆಯಿಂದ ಪಡೆದ ಸಾಲವೇ ಹೆಚ್ಚಿನದಾಗಿದೆ. 2024-25ನೇ ಆರ್ಥಿಕ ವರ್ಷದಲ್ಲಿ ಸುಮಾರು 96 ಲಕ್ಷ ರೂಪಾಯಿ ಆದಾಯವನ್ನು ಅವರು ಘೋಷಿಸಿದ್ದಾರೆ.
ಇನ್ನೊಂದೆಡೆ, ಬಿಜೆಪಿ ಅಭ್ಯರ್ಥಿ ಟಿ. ಶ್ರೀನಿವಾಸ್ ದಾಸಕರಿಯಪ್ಪ ಅವರು ಸುಮಾರು ಐದೂ ಮುಕ್ಕಾಲು ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ. ಇವರಲ್ಲಿ ಸ್ಥಿರಾಸ್ತಿ ಪ್ರಮಾಣವೇ ಹೆಚ್ಚು — ಸುಮಾರು 5.41 ಕೋಟಿ ರೂಪಾಯಿ. ಚರಾಸ್ತಿ ಸುಮಾರು 34 ಲಕ್ಷ ರೂಪಾಯಿ ಮಾತ್ರ. ಶ್ರೀನಿವಾಸ್ ಅವರಿಗೆ ಯಾವುದೇ ದೊಡ್ಡ ಸಾಲವಿಲ್ಲ, ಅಲ್ಪ ಪ್ರಮಾಣದ ಸಾಲ ಮಾತ್ರ ಸಹಕಾರಿ ಸಂಘದಲ್ಲಿ ಇದೆ. 2024-25ನೇ ಸಾಲಿನ ಅವರ ಆದಾಯ ಸುಮಾರು ಒಂದೂ ಮುಕ್ಕಾಲು ಲಕ್ಷ ರೂಪಾಯಿ ಎಂದು ಹೇಳಲಾಗಿದೆ.
ಒಟ್ಟಾರೆ ಹೋಲಿಕೆ ಮಾಡಿದರೆ, ಒಟ್ಟು ಆಸ್ತಿಯಲ್ಲಿ ಶ್ರೀನಿವಾಸ್ ದಾಸಕರಿಯಪ್ಪ ಮುಂಚೂಣಿಯಲ್ಲಿ ಇದ್ದಾರೆ. ವಿಶೇಷವಾಗಿ ಕಡಿಮೆ ಸಾಲ ಇರುವುದರಿಂದ ಅವರ ಆರ್ಥಿಕ ಸ್ಥಿತಿ ಇನ್ನಷ್ಟು ಬಲಿಷ್ಠವಾಗಿದೆ. ಸಮರ್ಥ್ ಶಾಮನೂರು ಅವರಲ್ಲಿ ಆಸ್ತಿ ಇದ್ದರೂ, ಹೆಚ್ಚಿನ ಸಾಲ ಇರುವುದರಿಂದ ನೆಟ್ ಆಸ್ತಿ ಪ್ರಮಾಣ ಕಡಿಮೆಯಾಗುತ್ತದೆ.
ಹೀಗಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಹೆಚ್ಚು ಶ್ರೀಮಂತ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗೆ ಉತ್ತರ — ಟಿ. ಶ್ರೀನಿವಾಸ್ ದಾಸಕರಿಯಪ್ಪ ಅಂತನೇ ಹೇಳಬಹುದು .
