Ashwaveega News 24×7 – ಜನವರಿ 11 – ಮಂಗಳಮುಖಿಯೆಂದರೆ ಈಕಡೆ ಹೆಣ್ಣು ಅಲ್ಲದ, ಆ ಕಡೆ ಗಂಡು ಅಲ್ಲದ ಒಂದು ವ್ಯಕ್ತಿಯ ಮನಸ್ಥಿತಿ ಎನ್ನಬಹುದು. ಸಿಗ್ನಲ್ಗಳಲ್ಲಿ, ರಸ್ತೆ ಬದಿಗಳಲ್ಲಿ, ಹೆಚ್ಚು ಜನಸಂದಣಿಯಿರುವ ಪ್ರದೇಶಗಳಲ್ಲಿ ಕೈತಟ್ಟಿ ಹಣ ಬೇಡಿ ಅದರಿಂದ ಜೀವನ ನಡೆಸುವ ಸ್ವಾವಲಂಭಿ ಜೀವನ ಇವರದ್ದು.
ಇವರನ್ನು ಅಧಿಕೃತವಾಗಿ ತೃತೀಯ ಲಿಂಗ ಮತ್ತು ಮಂಗಳಮುಖಿಯರೆಂದು ಕರೆಯಲಾಗುತ್ತಿದೆ. ಇದಕ್ಕೂ ಮೊದಲು ಮಂಗಳಮುಖಿಯರನ್ನು ನಪುಂಸಕ, ಚಕ್ಕ, ಕೋಜಾ, ಹಿಜ್ರಾ, ದ್ವಿಲಿಂಗಿ, ಶಿಖಂಡಿ ಹೀಗೆ ನಾನಾ ವಿದಧ ಹೆಸರುಗಳಿಂದ ಕರೆಯಲಾಗುತ್ತದೆ.
ಮಂಗಳಮುಖಿಯರ ಜೀವನದ ನೋವು–ನಲಿವನ್ನು ತೆರೆದಿಡುವ ‘ಶಿವಲೀಲಾ’ ಕನ್ನಡ ಚಿತ್ರಕ್ಕೆ ರಾಜ್ಯದಲ್ಲಿ ಸೂಕ್ತ ಥಿಯೇಟರ್ಗಳು ಸಿಗದಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ವಾಣಿಜ್ಯ ಸಿನಿಮಾಗಳಿಗೆ ಆದ್ಯತೆ ನೀಡುತ್ತಿರುವ ಸರ್ಕಾರ ಮತ್ತು ಪ್ರದರ್ಶನ ವ್ಯವಸ್ಥೆ ವಿರುದ್ಧ ಶಿವಲೀಲಾ ಚಿತ್ರತಂಡ ಹಾಗೂ ಮಂಗಳಮುಖಿ ಸಮುದಾಯ ಬೀದಿಗೆ ಇಳಿದಿದೆ.
ಈ ಹೋರಾಟಕ್ಕೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜೋಗತಿ ಮಂಜಮ್ಮ ಅವರು ನೇತೃತ್ವ ವಹಿಸಿದ್ದು, “ನಮಗೆ ನಿಮ್ಮ ಅನುಕಂಪ ಬೇಡ, ಸಮಾನತೆ ಬೇಕು” ಎಂದು ಸರ್ಕಾರಕ್ಕೆ ಕಠಿಣ ಸಂದೇಶ ನೀಡಿದ್ದಾರೆ. ಸಮಾಜದ ಅಂಚಿನಲ್ಲಿರುವ ಮಂಗಳಮುಖಿಯರ ಬದುಕನ್ನು ಚಿತ್ರಿಸುವ ಸಿನಿಮಾಗೆ ಬೆಲೆ ಇಲ್ಲದಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಪ್ರತಿಭಟನೆ ನಡೆಸಿದ ಚಿತ್ರತಂಡ ಹಾಗೂ ಹೋರಾಟಗಾರರು, ಸಿಎಂ ನಿವಾಸ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದರು. ಕನ್ನಡದ ಸಾಮಾಜಿಕ ಹೊಣೆಗಾರಿಕೆಯ ಚಿತ್ರಗಳಿಗೆ ಥಿಯೇಟರ್ ನೀಡದೇ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
‘ಶಿವಲೀಲಾ’ ಚಿತ್ರವನ್ನು ಕೇವಲ ಮನರಂಜನೆಯ ದೃಷ್ಟಿಯಿಂದಲ್ಲ, ಸಾಮಾಜಿಕ ಅರಿವು ಮೂಡಿಸುವ ಶಿಕ್ಷಣಾತ್ಮಕ ಚಿತ್ರವಾಗಿ ವಿದ್ಯಾರ್ಥಿಗಳು ನೋಡಲೇಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಕಡ್ಡಾಯ ಪ್ರದರ್ಶನ ಮಾಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ.
ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶ ಮಾಡಿ, ‘ಶಿವಲೀಲಾ’ ಚಿತ್ರಕ್ಕೆ ಥಿಯೇಟರ್ ಒದಗಿಸಬೇಕು ಮತ್ತು ಸಮಾಜದ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಕನ್ನಡ ಸಿನಿಮಾಗಳಿಗೆ ನ್ಯಾಯ ಒದಗಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.
ಲಿಂಗತ್ವ ಅಲ್ಪಸಂಖ್ಯಾತರ ಕುರಿತ ‘ಶಿವಲೀಲಾ’ ಚಿತ್ರಕ್ಕೆ ಚಿತ್ರಮಂದಿರ ನೀಡದ ಅನ್ಯಾಯ ವಿರೋಧಿಸಿ ಮಂಜಮ್ಮ ಜೋಗತಿ ನೇತೃತ್ವದಲ್ಲಿ ಚಿತ್ರತಂಡ ಪ್ರತಿಭಟನೆ ನಡೆಸಿತು.
