Ashwaveega News 24×7 ಏಪ್ರಿಲ್ 4– 2026 : ನಂಜನಗೂಡು ತಾಲೂಕಿನ ತಹಶೀಲ್ದಾರ್ ಡಾ. ಸ್ಮಿತಾ ರಾಮು ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ರೈತನೊಬ್ಬರಿಗೆ FIR ದಾಖಲಿಸುವುದಾಗಿ ಧಮ್ಕಿ ಹಾಕಿದ ಆರೋಪ ಇದೀಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ನೇರಳೆ ಗ್ರಾಮದ ದೊಡ್ಡಮಾದೇಗೌಡ ಎಂಬ ರೈತ ತಮ್ಮ ತಂದೆಗೆ ಬಗರ್ ಹುಕುಂ ಸಾಗುವಳಿಯಲ್ಲಿ ಮಂಜೂರಾದ ಜಮೀನಿನ ದುರಸ್ತಿ ವಿಳಂಬದ ಬಗ್ಗೆ ಅರ್ಜಿ ಸಲ್ಲಿಸಲು ತಹಶೀಲ್ದಾರ್ ಕಚೇರಿಗೆ ತೆರಳಿದ್ದರು. ಈ ವೇಳೆ, ಸಮಸ್ಯೆ ಕೇಳಿಕೊಳ್ಳುವುದರ ಬದಲು FIR ಹಾಕಿಸುವುದಾಗಿ ತಹಶೀಲ್ದಾರ್ ಧಮ್ಕಿ ಹಾಕಿದ್ದಾರೆ ಎಂಬ ಆರೋಪ ರೈತನಿಂದ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ, ರೈತ ದೊಡ್ಡಮಾದೇಗೌಡ ಅವರು ಮೈಸೂರು ಪ್ರಾದೇಶಿಕ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ದೂರು ಆಧರಿಸಿ, ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಾದೇಶಿಕ ಆಯುಕ್ತರು ಸೂಚನೆ ನೀಡಿದ್ದಾರೆ.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತ ಮುಖಂಡ ವಿದ್ಯಾಸಾಗರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಂಜನಗೂಡು ತಹಶೀಲ್ದಾರ್ ಬ್ರಿಟಿಷ್ ಆಡಳಿತದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಸಮಸ್ಯೆ ಹೇಳಲು ಹೋಗುವ ರೈತರಿಗೆ ಸೌಜನ್ಯಕ್ಕೂ ಕುರ್ಚಿ ನೀಡದೆ ಅವಮಾನ ಮಾಡಲಾಗುತ್ತಿದೆ. ಇದೇ ವರ್ತನೆ ಮುಂದುವರಿದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
