Ashwaveega News 24×7 ಜನವರಿ 25 – ವಿಜಯಪುರ : ನಟ ಪುನೀತ್ ರಾಜ್ಕುಮಾರ್ ಅವರ ನಿಧನ ಮತ್ತು ಮನೆಯ ವಾಸ್ತು ನಡುವೆ ಸಂಬಂಧವಿದೆ ಎಂಬ ಸ್ಫೋಟಕ ಹೇಳಿಕೆಯನ್ನು ವಿರಾಜ ಮಹಾಸ್ವಾಮೀಜಿ ಹೇಳಿದ್ದಾರೆ . ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮಾತನಾಡಿದ ಅವರು, ಪುನೀತ್ ರಾಜ್ಕುಮಾರ್ ಅವರ ಸಾವಿಗೂ ಮುನ್ನವೇ ಈ ವಿಚಾರವನ್ನು ಅವರ ಆಪ್ತರಿಗೆ ತಿಳಿಸಿದ್ದೆ ಎಂದು ಹೇಳಿದ್ದಾರೆ.
“ಪುನೀತ್ ರಾಜ್ಕುಮಾರ್ ಅವರ ಮನೆ ಪಶ್ಚಿಮ ದ್ವಾರದಲ್ಲಿದೆ. ವಾಸ್ತು ದೃಷ್ಟಿಯಿಂದ ಸಮಸ್ಯೆಯಿದೆ ಎಂಬುದನ್ನು ನಾನು ಸೂಕ್ಷ್ಮವಾಗಿ ಅವರ ಕಡೆಯವರಿಗೆ ತಿಳಿಸಿದ್ದೆ” ಎಂದು ಸ್ವಾಮೀಜಿ ಹೇಳಿದ್ದಾರೆ. ಆದರೆ ಈ ವಿಷಯ ನೇರವಾಗಿ ಪುನೀತ್ ರಾಜ್ಕುಮಾರ್ ಅವರಿಗೆ ತಲುಪಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.
ಪುನೀತ್ ರಾಜ್ಕುಮಾರ್ ಅವರು ಹೃದಯಾಘಾತದಿಂದ ನಿಧನರಾದರು ಎಂದು ಹೇಳಿರುವ ಸ್ವಾಮೀಜಿ, ಈ ಘಟನೆಗೆ ವಾಸ್ತು ದೋಷವೂ ಒಂದು ಕಾರಣವಾಗಿರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಮೋಸ್ಟ್ ವಾಂಟೆಡ್ ಡಾನ್ ಮುತ್ತಪ್ಪ ರೈ ಅವರ ಸಾವಿನ ಕುರಿತು ಕೂಡ ಸ್ವಾಮೀಜಿ ಮಾತನಾಡಿದ್ದಾರೆ. “ಮುತ್ತಪ್ಪ ರೈಗೂ ನಾನು ಈ ಬಗ್ಗೆ ಮುಂಚೆಯೇ ಹೇಳಿದ್ದೆ. ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ನಾನು ಅವರನ್ನು ಚಿಕಿತ್ಸೆ ಮೂಲಕ ಗುಣಪಡಿಸುತ್ತಿದ್ದೆ” ಎಂದು ಹೇಳಿದ್ದಾರೆ.
“ಸಮಯ ಕೈ ಮೀರಿದ ನಂತರ ಕರೆ ತರಬೇಡಿ ಎಂದು ನಾನು ಹೇಳಿದ್ದೆ. ಸಾವಿರ ಕೋಟಿ ಆಸ್ತಿ ಇದ್ದರೂ ಮುತ್ತಪ್ಪ ರೈ ಬದುಕಲಿಲ್ಲ” ಎಂದು ಸ್ವಾಮೀಜಿ ಹೇಳಿಕೆ ಕೊಟ್ಟಿದ್ದಾರೆ . ಅಪ್ಪು ಹಾಗೂ ಮುತ್ತಪ್ಪ ರೈ ಅವರ ಸಾವಿನ ಕುರಿತು ವಿರಾಜ ಮಹಾಸ್ವಾಮೀಜಿ ನೀಡಿರುವ ಈ ಹೇಳಿಕೆಗಳು ಭಾರೀ ಚರ್ಚೆಗೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
