Ashwaveega News 24×7 ಫೆಬ್ರವರಿ 02-2026 : ಕೇಂದ್ರ ಸರ್ಕಾರದ ನೀತಿ ಮತ್ತು ಹೊಸ ಬಿಲ್ಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಜಿ ರಾಮ್ ಜಿ ಬಿಲ್ನಲ್ಲಿ ರಾಮಾಯಣದ ರಾಮನೂ ಇಲ್ಲ, ಸೀತಾರಾಮನೂ ಇಲ್ಲ. ಅಲ್ಲಿ ಸಿದ್ದರಾಮನೂ ಇಲ್ಲ” ಎಂದು ವ್ಯಂಗ್ಯವಾಡಿದ ಸಿಎಂ, ಕೇಂದ್ರದ ನಡೆಗೆ ಕಿಡಿಕಾರಿದ್ದಾರೆ.
“ನಾವು ಕೇಂದ್ರ ಸರ್ಕಾರದ ವಿರುದ್ಧ ಇರುವವರು. ನಿಮ್ಮದು ಒಂದು ಐಡಿಯಾಲಜಿ, ನಮ್ಮದು ಬೇರೆ ಐಡಿಯಾಲಜಿ. ನೀವು ನಮ್ಮ ಐಡಿಯಾಲಜಿ ಒಪ್ಪಬೇಕಿಲ್ಲ. ಆದರೆ ಸಂವಿಧಾನವನ್ನ ವಿರೋಧ ಮಾಡುವಂತಿಲ್ಲ” ಎಂದು ಸಿದ್ದರಾಮಯ್ಯ ಸ್ಪಷ್ಟ ಸಂದೇಶ ನೀಡಿದ್ದಾರೆ. ದೇಶದ ಆಡಳಿತ ಸಂವಿಧಾನಾಧಾರಿತವಾಗಿರಬೇಕು, ಐಡಿಯಾಲಜಿಗಳ ಹೋರಾಟ ಸಂವಿಧಾನದ ಮಿತಿಯೊಳಗೇ ನಡೆಯಬೇಕು ಎಂದು ಅವರು ಎಚ್ಚರಿಸಿದರು.
ಜಿ ರಾಮ್ ಜಿ ಬಿಲ್ ಕುರಿತು ಮಾತನಾಡಿದ ಸಿಎಂ, “ಈ ಬಿಲ್ನಲ್ಲಿ ರಾಮನ ಹೆಸರಿದೆ, ಆದರೆ ರಾಮಾಯಣದ ಮೌಲ್ಯಗಳೇ ಇಲ್ಲ” ಎಂದು ಟೀಕಿಸಿದರು. ಬಿಲ್ನ ಅಸಲಿ ಉದ್ದೇಶವೇನು ಎಂಬ ಪ್ರಶ್ನೆಯನ್ನು ಎತ್ತಿದ ಅವರು, ಕೇಂದ್ರ ಸರ್ಕಾರದ ಉದ್ದೇಶಗಳ ಮೇಲೆ ಅನುಮಾನ ವ್ಯಕ್ತಪಡಿಸಿದರು.
ಇದೇ ವೇಳೆ ರಾಜ್ಯಪಾಲರ ನಡೆ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, “ರಾಜ್ಯಪಾಲರು ಒಳ್ಳೆಯವರು. ನಾವು ಅವರ ವಿರುದ್ಧವಿಲ್ಲ” ಎಂದು ಸ್ಪಷ್ಟಪಡಿಸಿದರು. ಆದರೆ, “ಸಂವಿಧಾನ ಪ್ರಕಾರ ಗವರ್ನರ್ ಸದನದಲ್ಲಿ ಸರ್ಕಾರದ ಭಾಷಣವನ್ನು ಓದಬೇಕಿತ್ತು. ಆ ಪ್ರಕ್ರಿಯೆ ಪಾಲನೆಯಾಗದಿರುವುದು ಬೇಸರ ತಂದಿದೆ” ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯಪಾಲರ ನಡೆ ಮತ್ತು ಕೇಂದ್ರದ ನಿಲುವುಗಳು ರಾಜ್ಯದ ಸ್ವಾಯತ್ತತೆ ಹಾಗೂ ಸಂವಿಧಾನಾತ್ಮಕ ಮೌಲ್ಯಗಳ ಮೇಲೆ ಪ್ರಶ್ನಾರ್ಥಕ ಚಿಹ್ನೆ ಎಳೆಯುತ್ತಿವೆ ಎಂದು ಸಿಎಂ ಅಭಿಪ್ರಾಯಪಟ್ಟರು. ಸಂವಿಧಾನಕ್ಕೆ ವಿರುದ್ಧವಾಗಿ ನಡೆಯುವ ಯಾವುದೇ ಪ್ರಯತ್ನಗಳನ್ನು ನಾವು ಒಪ್ಪುವುದಿಲ್ಲ ಎಂದು ಸಿದ್ದರಾಮಯ್ಯ ಕಟ್ಟುನಿಟ್ಟಾಗಿ ಹೇಳಿದರು.
ಒಟ್ಟಾರೆ, ಕೇಂದ್ರ–ರಾಜ್ಯ ಸಂಬಂಧ, ಐಡಿಯಾಲಜಿಗಳ ಸಂಘರ್ಷ ಮತ್ತು ಸಂವಿಧಾನಾತ್ಮಕ ಮೌಲ್ಯಗಳ ವಿಚಾರ ಮತ್ತೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.
