Ashwaveega News 24×7 ಮಾರ್ಚ್ 19 – 2026 : ರಾಜಕೀಯದಲ್ಲಿ ವಿರೋಧಿಗಳೇ ಇಲ್ಲದ ವ್ಯಕ್ತಿತ್ವವನ್ನು ಹೊಂದಿರುವ ಅಜಾತಶತ್ರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವುದು ಪಕ್ಷದೊಳಗಿನ ಎರಡು ಬಣಗಳ ಅಸಮಾಧಾನವನ್ನು ಶಮನಗೊಳಿಸುವ ತಂತ್ರವಾಗಿಯೇ ಕಾಣುತ್ತಿದೆ .
ಶ್ರೀನಿವಾಸ್ ದಾಸಕರಿಯಪ್ಪ ಅವರು ಸಿದ್ದೇಶ್ವರ್ ಬಣದಲ್ಲಿ ಗುರುತಿಸಿಕೊಂಡಿದ್ದರೂ, ರೇಣುಕಾ ಬಣದ ವಿರುದ್ಧ ಯಾವತ್ತೂ ತಿರುಗಿಬಿದ್ದಿಲ್ಲ. ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡದೇ, ಎರಡೂ ಬಣಗಳ ನಾಯಕರ ಜೊತೆ ಉತ್ತಮ ಸಂಬಂಧವನ್ನು ಕಾಪಾಡಿಕೊಂಡಿರುವುದು ಅವರ ಪ್ರಮುಖ ಶಕ್ತಿಯಾಗಿದೆ .
ಈ ಹಿನ್ನೆಲೆದಲ್ಲಿ ಅವರಿಗೆ ಟಿಕೆಟ್ ನೀಡಿರುವುದು ಯಾರಿಗೂ ತಕರಾರು ಮೂಡಿಸಿಲ್ಲ. ಸಿದ್ದೇಶ್ವರ್ ಬಣಕ್ಕೂ ವಿರೋಧ ಇಲ್ಲ, ರೇಣುಕಾ ಬಣವೂ ಸಹ ಸಂಪೂರ್ಣ ಬೆಂಬಲ ನೀಡಲು ಮುಂದಾಗಿದೆ. ಇದೀಗ ಶ್ರೀನಿವಾಸ್ ಅವರನ್ನು ಗೆಲ್ಲಿಸಲು ರೇಣುಕಾ ಬಣ ಕೂಡ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷ .
ಒಂದೇ ನಿರ್ಧಾರದಿಂದ ಎರಡು ಬಣಗಳ ಅಸಮಾಧಾನವನ್ನು ಕಡಿಮೆ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ . ಇದು ಪಕ್ಷದ ಒಳಗಟ್ಟಿನ ಸಮತೋಲನ ಕಾಪಾಡುವ ರಾಜಕೀಯ ಹೆಜ್ಜೆಯಾಗಿ ವಿಶ್ಲೇಷಿಸಲಾಗುತ್ತಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿಯೇ ಟಿಕೆಟ್ಗಾಗಿ ಶ್ರೀನಿವಾಸ್ ಪ್ರಯತ್ನಿಸಿದ್ದರು. ಆದರೆ ಆ ಸಂದರ್ಭದಲ್ಲಿ ಬಿಜೆಪಿ ಅಜಯ್ ಕುಮಾರ್ ಅವರಿಗೆ ಅವಕಾಶ ನೀಡಿತ್ತು. ಅವರು ಶಾಮನೂರು ವಿರುದ್ಧ ಸುಮಾರು 25 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು.
ಆ ಅನುಭವದಿಂದ ಪಾಠ ಕಲಿತಿರುವ ಬಿಜೆಪಿ, ಈ ಬಾರಿ ಅದೇ ತಪ್ಪು ಮರುಕಳಿಸಬಾರದು ಎಂಬ ಉದ್ದೇಶದಿಂದ ಎಲ್ಲರಿಗೂ ಒಪ್ಪಿಗೆಯಾಗುವ ಅಭ್ಯರ್ಥಿಯಾಗಿ ಶ್ರೀನಿವಾಸ್ ದಾಸಕರಿಯಪ್ಪ ಅವರನ್ನು ಆಯ್ಕೆ ಮಾಡಿದೆ .
ಒಟ್ಟಿನಲ್ಲಿ, ಪಕ್ಷದ ಒಳಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸಲು ಬಿಜೆಪಿ ತೆಗೆದುಕೊಂಡಿರುವ ಈ ನಿರ್ಧಾರ ಚುನಾವಣೆ ಫಲಿತಾಂಶದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
