Ashwaveega News 24×7 ಮಾರ್ಚ್ 23 – 2026 : ಮುಂಬೈ : ಗಲ್ಫ್ ರಾಷ್ಟ್ರಗಳಲ್ಲಿ ಉಂಟಾದ ಯುದ್ಧ ಪರಿಸ್ಥಿತಿಯ ಪರಿಣಾಮ ಭಾರತೀಯ ಷೇರುಪೇಟೆಯ ಮೇಲೆ ಭಾರೀ ಹೊಡೆತ ನೀಡಿದೆ. ವಹಿವಾಟು ಆರಂಭವಾದ ಕೆಲವೇ ಹೊತ್ತಿನಲ್ಲಿ ಮಾರುಕಟ್ಟೆ ತೀವ್ರ ಕುಸಿತ ಕಂಡಿದೆ .
BSE Sensex ಇಂದು ಸುಮಾರು 1700 ಪಾಯಿಂಟ್ಗಳಷ್ಟು ಕುಸಿದರೆ, Nifty 50 540 ಪಾಯಿಂಟ್ಗಳಷ್ಟು ಇಳಿಕೆಯಾಗಿದೆ. ಆರಂಭಿಕ ವಹಿವಾಟಿನಲ್ಲೇ ಸೂಚ್ಯಂಕಗಳು ಕೆಳಮುಖಗೊಂಡಿದ್ದು, ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.
ಕೇವಲ ಎರಡು ಗಂಟೆಗಳ ಅವಧಿಯಲ್ಲಿ ಸುಮಾರು ₹7 ಲಕ್ಷ ಕೋಟಿ ಮೌಲ್ಯದ ಹೂಡಿಕೆ ಮಾರುಕಟ್ಟೆಯಿಂದ ಮಾಯವಾಗಿದೆ ಎಂದು ಅಂದಾಜಿಸಲಾಗಿದೆ. ಸಾವಿರಕ್ಕೂ ಹೆಚ್ಚು ಷೇರುಗಳು ಭಾರೀ ಇಳಿಕೆಯನ್ನು ಕಂಡಿದ್ದು, ಮಾರುಕಟ್ಟೆ “ರಕ್ತದೋಕುಳಿ”ಯಂತಾಗಿದೆ.
ಯುದ್ಧದ ಪರಿಣಾಮ ಕೇವಲ ಒಂದೆರಡು ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿಲ್ಲ. ಬ್ಯಾಂಕಿಂಗ್, ಐಟಿ, ಎನರ್ಜಿ ಸೇರಿದಂತೆ ಎಲ್ಲಾ ವಲಯಗಳಲ್ಲೂ ಕುಸಿತ ಕಂಡುಬಂದಿದೆ. ಇದರಿಂದ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.
ವಿಶೇಷವಾಗಿ, ಯುದ್ಧದ ಕಾರಣ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು, ಇದು ಮಾರುಕಟ್ಟೆಯ ಮೇಲೆ ಹೆಚ್ಚುವರಿ ಒತ್ತಡ ತಂದಿದೆ. ಇನ್ನೊಂದೆಡೆ, ಬಂಗಾರ ಮತ್ತು ಬೆಳ್ಳಿ ದರಗಳಲ್ಲಿ ಇಳಿಕೆ ಮುಂದುವರಿದಿರುವುದು ಗಮನಾರ್ಹವಾಗಿದೆ.
ಜಾಗತಿಕ ಅಸ್ಥಿರತೆ ಮುಂದುವರಿದರೆ ಷೇರುಪೇಟೆಯಲ್ಲಿನ ಅಲೆಮಾರಿ ಇನ್ನೂ ಕೆಲ ದಿನಗಳು ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಹೂಡಿಕೆದಾರರು ಎಚ್ಚರಿಕೆಯಿಂದ ಮುಂದುವರಿಯಬೇಕು ಎಂಬ ಸಲಹೆ ನೀಡಲಾಗಿದೆ.
ಒಟ್ಟಿನಲ್ಲಿ, ಗಲ್ಫ್ ಯುದ್ಧದ ಕರಿನೆರಳು ದಲಾಲ್ ಸ್ಟ್ರೀಟ್ ಮೇಲೆ ಬಿದ್ದಿದ್ದು, ಮಾರುಕಟ್ಟೆ ಮುಂದಿನ ದಿನಗಳಲ್ಲಿ ಹೇಗೆ ನಡೆದುಕೊಳ್ಳಲಿದೆ ಎಂಬುದರ ಬಗ್ಗೆ ಕುತೂಹಲ ಹೆಚ್ಚಾಗಿದೆ.
