Ashwaveega News 24×7 ಫೆಬ್ರವರಿ 10 -2026 – ಬೆಂಗಳೂರು : ಬಿಗ್ ಬಾಸ್ ವಿನ್ನರ್ ಗಿಲ್ಲಿ ನಾಯಕನಾಗಿ ನಟಿಸಿರುವ, ವಿಜಯಾನಂದ್ ನಿರ್ದೇಶನದ ಹೊಸ ಕನ್ನಡ ಸಿನಿಮಾ ‘ಸೂಪರ್ ಹಿಟ್’ ಫೆಬ್ರವರಿ 27ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ. ತನ್ನ ಶೀರ್ಷಿಕೆಯಲ್ಲೇ ಕುತೂಹಲ ಹುಟ್ಟು ಹಾಕಿದ್ದ ಈ ಸಿನಿಮಾ, ಗಿಲ್ಲಿಯ ಅಪಾರ ಜನಪ್ರಿಯತೆಯಿಂದಾಗಿ ಈಗಾಗಲೇ ಸಿನಿಪ್ರೇಕ್ಷಕರ ಗಮನ ಸೆಳೆದಿದೆ.
ಚಿತ್ರದ ಬಿಡುಗಡೆ ದಿನಾಂಕವನ್ನು ಇತ್ತೀಚೆಗೆ ಆಯೋಜಿಸಿದ್ದ ಅಚ್ಚುಕಟ್ಟಾದ ಪತ್ರಿಕಾಗೋಷ್ಠಿಯಲ್ಲಿ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಈ ಕಾರ್ಯಕ್ರಮದಲ್ಲಿ ನಿರ್ದೇಶಕ ವಿಜಯಾನಂದ್, ನಿರ್ಮಾಪಕ ಜಿ. ಉಮೇಶ್, ನಟ ಸಾಧು ಕೋಕಿಲಾ, ಕವಿರತ್ನ ಡಾ. ವಿ. ನಾಗೇಂದ್ರ ಪ್ರಸಾದ್, ಗೌರವ್ ಶೆಟ್ಟಿ, ಶ್ವೇತಾ ಸೇರಿದಂತೆ ಚಿತ್ರತಂಡದ ಪ್ರಮುಖರು ಭಾಗವಹಿಸಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ವಿಜಯಾನಂದ್, ಕಥೆ ಸಿದ್ಧವಾದ ದಿನಗಳಿಂದ ಹಿಡಿದು ಸಿನಿಮಾ ಪೂರ್ಣಗೊಳ್ಳುವವರೆಗಿನ ಮಧುರ ಅನುಭವಗಳನ್ನು ಹಂಚಿಕೊಂಡರು. ಕಥೆ ಬರೆಯಲು ಆರಂಭಿಸಿದ ಕ್ಷಣದಿಂದ ಎಲ್ಲವೂ ಸುಗಮವಾಗಿ ನಡೆದಿದ್ದು, ಯಾವುದೇ ಕೊರತೆಯಾಗದಂತೆ ಸಿನಿಮಾ ನಿರ್ಮಾಣ ಮಾಡಿರುವ ನಿರ್ಮಾಪಕ ಜಿ. ಉಮೇಶ್ ಅವರ ಸಿನಿಮಾ ಪ್ರೇಮವನ್ನು ಶ್ಲಾಘಿಸಿದರು. ಚಿತ್ರದ ಕಂಟೆಂಟ್ ಬಗ್ಗೆ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ ಅವರು, ‘ಸೂಪರ್ ಹಿಟ್’ ನೂರು ದಿನಗಳ ಯಶಸ್ವಿ ಪ್ರದರ್ಶನ ನೀಡಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.
ಇದೇ ವೇಳೆ, ‘ಸೂಪರ್ ಹಿಟ್’ ಚಿತ್ರದ ಓಟಿಟಿ ಹಕ್ಕುಗಳನ್ನು ಹೊಸ ಸಂಸ್ಥೆಯೊಂದು ದೊಡ್ಡ ಮೊತ್ತಕ್ಕೆ ಖರೀದಿಸಿದೆ ಎಂಬ ಮಾಹಿತಿಯನ್ನೂ ವಿಜಯಾನಂದ್ ಹಂಚಿಕೊಂಡರು. ನಿರ್ಮಾಪಕ ಜಿ. ಉಮೇಶ್ ಚುಟುಕಾದ ಮಾತುಗಳಲ್ಲಿ ತಮ್ಮ ಸಿನಿಮಾ ಪ್ರೇಮ ಹಾಗೂ ಚಿತ್ರದ ಮೇಲಿನ ನಂಬಿಕೆಯನ್ನು ವ್ಯಕ್ತಪಡಿಸುತ್ತಲೇ, ತಮ್ಮ ಮೊದಲ ಹೆಜ್ಜೆಯಾದ ಈ ಸಿನಿಮಾವನ್ನು ಪ್ರೇಕ್ಷಕರು ಬೆಂಬಲಿಸಬೇಕೆಂದು ಮನವಿ ಮಾಡಿಕೊಂಡರು.
ಸಾಹಿತ್ಯ ಮತ್ತು ಸಂಗೀತದ ಜೊತೆಗೆ ವಿಶೇಷ ಪಾತ್ರವೊಂದರಲ್ಲಿ ನಟಿಸಿರುವ ಕವಿರತ್ನ ಡಾ. ವಿ. ನಾಗೇಂದ್ರ ಪ್ರಸಾದ್, ಸಿನಿಮಾ ಮೂಡಿ ಬಂದಿರುವ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗಿಲ್ಲಿಯ ಯಶದ ಪ್ರಭೆ ಚಿತ್ರಕ್ಕೆ ದೊಡ್ಡ ವರವಾಗಿದ್ದು, ನಟನಾಗಿ ಪಡೆದ ಅವಕಾಶಗಳಿಗೆ ಪ್ರಚಾರ ನೀಡುವ ಜವಾಬ್ದಾರಿಯ ಬಗ್ಗೆ ಪ್ರೀತಿಯಿಂದ ಸಲಹೆ ನೀಡಿದರು.

ಆ ನಂತರ ಮಾತನಾಡಿದ ನಾಯಕ ಗಿಲ್ಲಿ, ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸುತ್ತಲೇ, ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು. ಇತ್ತೀಚೆಗೆ ಉಂಟಾಗಿದ್ದ ಕೆಲ ವಿವಾದಗಳ ಬಗ್ಗೆ ಸ್ಪಷ್ಟನೆ ನೀಡಿದ ಅವರು, ‘ಸೂಪರ್ ಹಿಟ್’ ಚಿತ್ರವನ್ನು ನೋಡಿ ಪ್ರೋತ್ಸಾಹಿಸುವಂತೆ ಪ್ರೇಕ್ಷಕರಿಗೆ ಮನವಿ ಮಾಡಿಕೊಂಡರು.
ಚಿತ್ರಕ್ಕೆ ಆರ್.ಡಿ. ನಾಗಾರ್ಜುನ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಗೂ ಸಂಗೀತ ನಿರ್ದೇಶನ ನೀಡಿದ್ದಾರೆ. ಡ್ರ್ಯಾಗನ್ ಮಂಜು, ಸಾಧು ಕೋಕಿಲಾ, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜೀಜಿ, ಗಿರಿ, ಟಿನಿಸ್ ಕೃಷ್ಣ, ಕರಿಸುಬ್ಬು, ವಂಶಿ, ಮಂಜಣ್ಣ, ಬಿ.ಎನ್. ಮಂಗಳ, ಮಂಗಳೂರು ಮೀನನಾಥ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಕಾಮಿಡಿ–ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ‘ಸೂಪರ್ ಹಿಟ್’ ಸಿನಿಮಾ ಫೆಬ್ರವರಿ 27ರಂದು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಗಾಣಲಿದೆ.
