Ashwaveega News 24×7 ಫೆಬ್ರವರಿ 09 -2026 – ಬೆಂಗಳೂರು : ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರವಾಗಿ ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ರಾಜ್ಯದ ‘ಕೈ’ ಸರ್ಕಾರದ ವಿರುದ್ಧ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬೆಂಕಿ ಸುರಿಸಿದ್ದಾರೆ.
ಮೆಟ್ರೋ ದರ ಏರಿಕೆಗೆ ವಿರೋಧ ವ್ಯಕ್ತಪಡಿಸಲು ಖಾಲಿ “ಟ್ರಂಕ್” ಹಿಡಿದು ಪ್ರತಿಭಟನೆಗೆ ಮುಂದಾದ ತೇಜಸ್ವಿ ಸೂರ್ಯ, ಖಾಲಿ ಟ್ರಂಕ್ ಜೊತೆಗೆ ಮೆಟ್ರೋ ಹತ್ತಲು ಯತ್ನಿಸಿದರು. ಆದರೆ ಈ ವೇಳೆ ಬೆಂಗಳೂರು ಪೊಲೀಸರು ಮಧ್ಯಪ್ರವೇಶಿಸಿ ತೇಜಸ್ವಿ ಸೂರ್ಯರ ಪ್ರತಿಭಟನೆಗೆ ಅಡ್ಡಿಪಡಿಸಿದರು.
ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ, ತೇಜಸ್ವಿ ಸೂರ್ಯರನ್ನು ವಶಕ್ಕೆ ಪಡೆಯಲು ಮುಂದಾದ ಖಾಕಿ ಪಡೆ, ಸಂಸದರನ್ನು ಪೊಲೀಸ್ ಜೀಪ್ಗೆ ಹತ್ತಿಸಲು ಯತ್ನಿಸಿದೆ. ಇದರಿಂದ ಸ್ಥಳದಲ್ಲೇ ತೇಜಸ್ವಿ ಸೂರ್ಯ ಕೆಂಡಾಮಂಡಲರಾಗಿ ಪೊಲೀಸರಿಗೆ ಕಾನೂನು ಪಾಠ ಮಾಡಿದರು.
“ಸಂಸತ್ ಅಧಿವೇಶನ ನಡೆಯುವ ವೇಳೆ ಯಾವುದೇ ಸಂಸದರನ್ನು ಪೊಲೀಸರು ಮುಟ್ಟುವಂತಿಲ್ಲ. ಸಂಸದರನ್ನು ಬಂಧಿಸಬೇಕಾದರೆ ಸ್ಪೀಕರ್ ಅನುಮತಿ ಅಗತ್ಯ” ಎಂದು ತೇಜಸ್ವಿ ಸೂರ್ಯ ಸ್ಪಷ್ಟವಾಗಿ ತಿಳಿಸಿದರು.
ಈ ಮೂಲಭೂತ ನಿಯಮವನ್ನೇ ಮರೆತಿದ್ದ ಬೆಂಗಳೂರು ಪೊಲೀಸರು, ತೇಜಸ್ವಿ ಸೂರ್ಯರ ಮಾತಿನ ಬಳಿಕ ಎಚ್ಚೆತ್ತುಕೊಂಡು, ಅವರನ್ನು ಜೀಪ್ನಿಂದ ತಕ್ಷಣ ಕೆಳಗಿಳಿಸಿ ಬಿಡುಗಡೆ ಮಾಡಿದರು. ಕೇವಲ ಒಂದು ನಿಮಿಷದಲ್ಲಿ ತೇಜಸ್ವಿ ಸೂರ್ಯ ಬಂಧನ ಹಾಗೂ ಬಿಡುಗಡೆ ನಡೆದ ಘಟನೆ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿತು.
ಈ ಘಟನೆಯ ಬಳಿಕ ಬೆಂಗಳೂರು ಪೊಲೀಸರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ತೇಜಸ್ವಿ ಸೂರ್ಯ, “ಸಿಎಂ ಸಿದ್ದರಾಮಯ್ಯ ಸರ್ಕಾರದ ದಮನಕಾರಿ ನೀತಿ ಇದು” ಎಂದು ಆರೋಪಿಸಿದರು.
ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರ ಇದೀಗ ಕೇವಲ ಸಾರಿಗೆ ಸಮಸ್ಯೆಯಲ್ಲ, ರಾಜಕೀಯ ಸಂಘರ್ಷವಾಗಿ ಬದಲಾಗಿದ್ದು, ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸೂಚನೆಗಳು ಕಾಣಿಸುತ್ತಿವೆ.
