Ashwaveega News 24×7 ಮಾರ್ಚ್ 31 – 2026 : ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಳ್ಳಂಬಳಸೆ ಗ್ರಾಮದ ಸರಳ ಹುಡುಗಿ ಸ್ಪೂರ್ತಿ, ತನ್ನ ಕಠಿಣ ಪರಿಶ್ರಮ ಮತ್ತು ಅಚಲ ಸಂಕಲ್ಪದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಗೋಲ್ಡ್ ಮೆಡಲ್ ಗೆದ್ದಿರುವುದು ಪ್ರೇರಣಾದಾಯಕ ಸಾಧನೆ .
ಬಾಲ್ಯದಿಂದಲೇ ಕ್ರೀಡೆಗಳ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಸ್ಪೂರ್ತಿ, ಅಜ್ಜ ಅಜ್ಜಿ ಅಪ್ಪ, ಅಮ್ಮನ ಕಟ್ಟುನಿಟ್ಟಿನ ಶಿಸ್ತು ಮತ್ತು ಮಾರ್ಗದರ್ಶನದಲ್ಲಿ ಬೆಳೆದವರು. ಅವರ ಹಿತವಚನಗಳು ಮತ್ತು ಜೀವನ ಮೌಲ್ಯಗಳು ಸ್ಪೂರ್ತಿಗೆ ಶಕ್ತಿಯಾಗಿದ್ದು, ಇಂದಿಗೂ ಅವರ ಜೊತೆ ಕಳೆದ ಕ್ಷಣಗಳನ್ನು ಸ್ಮರಿಸುತ್ತಾರೆ. ಕುಟುಂಬದ ಬೆಂಬಲವೂ ಇವರ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ .

ಬೆಂಗಳೂರಿನಲ್ಲಿ ಶಿಕ್ಷಣ ಪಡೆದ ಸ್ಪೂರ್ತಿ, ಗಿರಿ ಮಾರುತಿ ಶಾಲೆಯಲ್ಲಿ ಓದುತ್ತಿದ್ದಾಗಲೇ ಕಬಡ್ಡಿ, ಖೋ-ಖೋ, ತ್ರೋಬಾಲ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಮೊದಲ ಮತ್ತು ದ್ವಿತೀಯ ಸ್ಥಾನಗಳನ್ನು ಗಳಿಸುತ್ತಿದ್ದರು. ವಿಶೇಷವಾಗಿ ತ್ರೋಬಾಲ್ನಲ್ಲಿ ಹೆಚ್ಚಿನ ಅವಕಾಶಗಳು ದೊರಕಿದ ಹಿನ್ನೆಲೆಯಲ್ಲಿ ಅದರಲ್ಲಿ ತಮ್ಮನ್ನು ತಾವು ಹೆಚ್ಚು ತೊಡಗಿಸಿಕೊಂಡರು.
ಪಿಯುಸಿಯನ್ನು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪೂರೈಸಿದ ಅವರು, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ನ್ಯೂಟ್ರಿಷನ್ ಮತ್ತು ಡಯಟೆ ಟಿಕ್ಸ್ನಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ. ಓದು ಮತ್ತು ಕ್ರೀಡೆ ಎರಡನ್ನೂ ಸಮನ್ವಯಗೊಳಿಸಿಕೊಂಡರು.. ನಂತರ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಲೇ ಕ್ರೀಡೆಯಲ್ಲಿ ಗಮನ ಹರಿಸಿದರು.

ರೋಟರಿ ಕ್ಲಬ್ನ ತ್ರೋಬಾಲ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿದ್ದು ಸ್ಪೂರ್ತಿಯ ಜೀವನದಲ್ಲಿ ಮಹತ್ವದ ತಿರುವಾಗಿ ಪರಿಣಮಿಸಿತು. ಅಲ್ಲಿಂದಲೇ ರೈಸ್ ತ್ರೋಬಾಲ್ ಅಕಾಡೆಮಿಯ ಗಮನ ಸೆಳೆದರು. ಅಲ್ಲಿಂದ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದರು. 2025ರ ಡಿಸೆಂಬರ್ 28 ರಿಂದ 31ರವರೆಗೆ ಕೇರಳದ ಕೊಟ್ಟಾಯಂನಲ್ಲಿ ನಡೆದ 47ನೇ ಸೀನಿಯರ್ ನ್ಯಾಷನಲ್ ತ್ರೋಬಾಲ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದರು.
ಇದಾದ ನಂತರ, ಸ್ಪೂರ್ತಿಯ ಕನಸಾದ ಭಾರತ ತಂಡದಲ್ಲಿ ಅವಕಾಶ ದೊರಕಿತು. ರೈಸ್ ತ್ರೋಬಾಲ್ ಅಕಾಡೆಮಿಯ ಮೊಹಮ್ಮದ್ ವಾಜೀರ್ ಅವರ ಮಾರ್ಗದರ್ಶನದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದರು. ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ನೇಪಾಳ ವಿರುದ್ಧವೇ ನಡೆದ ಫೈನಲ್ ಪಂದ್ಯದಲ್ಲಿ ಗೆದ್ದ ಭಾರತ ತಂಡ ಗೋಲ್ಡ್ ಮೆಡಲ್ ಸಾಧಿಸಿತು. ಭಾರತ ತಂಡದ ಗೆಲುವಿನಲ್ಲಿ ಸ್ಪೂರ್ತಿಯವರ ಪಾತ್ರ ಪ್ರಮುಖವಾದುದು.
“ಭಾರತಕ್ಕಾಗಿ ಆಡುವುದು ನನ್ನ ಜೀವನದ ದೊಡ್ಡ ಕನಸು. ಈ ಗೆಲುವು ನಮ್ಮ ಸಂಪೂರ್ಣ ತಂಡದ ಪರಿಶ್ರಮದ ಫಲ” ಎಂದು ಸ್ಪೂರ್ತಿ ಹೇಳಿದ್ದಾರೆ.

ಇನ್ನೂ ಹೆಚ್ಚಿನ ಅವಕಾಶಗಳು ದೊರೆತರೆ ಕ್ರೀಡಾ ಕ್ಷೇತ್ರದಲ್ಲಿ ಮುಂದುವರೆಯುವ ಆಸೆಯನ್ನು ವ್ಯಕ್ತಪಡಿಸಿರುವ ಅವರು, ಸರ್ಕಾರದ ಬಳಿ ಸ್ಪಾನ್ಸರ್ಶಿಪ್ ಹಾಗೂ ಸ್ಪೋರ್ಟ್ಸ್ ಕೋಟಾದಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ತಮ್ಮ ಸಾಧನೆಗೆ ಕುಟುಂಬ, ಸ್ನೇಹಿತರು, ತಮಗೆ ಬೆಂಬಲವಾಗಿ ನಿಂತ ಅಶ್ವವೇಗ ನ್ಯೂಸ್ನ ಎಂಡಿ ರಾಮಚಂದ್ರ ಸರ್ ಹಾಗೂ ಅಶ್ವವೇಗ ನ್ಯೂಸ್ ಸಿಇಓ ಸುಮಾ ಮೇಡಂ ಮತ್ತು ಎಲ್ಲರಿಗೆ ಸ್ಪೂರ್ತಿ ಕೃತಜ್ಞತೆ ಸಲ್ಲಿಸಿದ್ದಾರೆ. ಅಂದ ಹಾಗೇ, ಸದ್ಯ ಸ್ಪೂರ್ತಿ ಅವರು ಅಶ್ವವೇಗ ನ್ಯೂಸ್ ಕುಟುಂಬದಲ್ಲಿ ಒಬ್ಬರು ಎನ್ನುವುದು ಸಂಸ್ಥೆಗೂ ಹೆಮ್ಮೆ.
ಒಟ್ಟಾರೆ, ಹಳ್ಳಿಯಿಂದ ಪ್ರಾರಂಭವಾದ ಸ್ಪೂರ್ತಿಯವರ ಪಯಣ, ಇದೀಗ ದೇಶದ ಗೌರವವನ್ನು ಹೆಚ್ಚಿಸಿದ ಮಟ್ಟಕ್ಕೆ ಬೆಳೆದಿದೆ. ನಿಜಕ್ಕೂ ಸ್ಪೂರ್ತಿಯವರದ್ದು ಸ್ಫೂರ್ತಿದಾಯಕ ಕಥನ …
