Ashwaveega News 24×7 ಮಾರ್ಚ್ 24 – 2026 : ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಈ ಘಟನೆ ಅರಣ್ಯ ಇಲಾಖೆಯ ಕಾರ್ಯಾಚರಣೆಯಲ್ಲಿನ ನಿರ್ಲಕ್ಷ್ಯವನ್ನು ಬೆಳಕಿಗೆ ತಂದಿದೆ.
ಚಾಮರಾಜನಗರ ಜಿಲ್ಲೆಯ Gundlupet ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಹುಲಿ ಸೆರೆ ಕಾರ್ಯಾಚರಣೆ ವೇಳೆ ಈ ಅವಘಡ ಸಂಭವಿಸಿದೆ. ‘ಆಪರೇಷನ್ ಬೀಸ್ಟ್’ ಕಾರ್ಯಾಚರಣೆಯ ಎರಡನೇ ಹಂತ ಯಶಸ್ವಿಯಾಗಿ ಮುಗಿದ ಬೆನ್ನಲ್ಲೇ ಈ ಎಡವಟ್ಟು ನಡೆದಿರುವುದು ಗಮನಾರ್ಹವಾಗಿದೆ.
ಬಂಡೀಪುರ ಅರಣ್ಯ ಸಿಬ್ಬಂದಿ ಕೂಂಬಿಂಗ್ ವೇಳೆ ಅನುಸರಿಸಬೇಕಾದ ನಿಯಮಗಳನ್ನು ಪಾಲಿಸದೇ ಆತುರದಲ್ಲಿ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಹುಲಿಗೆ ಅರವಳಿಕೆ (ಡಾಟ್) ನೀಡಿದ ಬಳಿಕ ಅದು ಸಂಪೂರ್ಣವಾಗಿ ಪ್ರಜ್ಞೆ ತಪ್ಪುವ ಮುನ್ನವೇ ಸೆರೆಹಿಡಿಯಲು ಮುಂದಾಗಿದ್ದು, ಇದೇ ದೊಡ್ಡ ತಪ್ಪಾಗಿ ಪರಿಣಮಿಸಿದೆ.

ಸಿಬ್ಬಂದಿ ಹತ್ತಿರ ಬರುತ್ತಿದ್ದಂತೆ ಗಾಬರಿಗೊಂಡ ಹುಲಿ ರಿವರ್ಸ್ ಅಟ್ಯಾಕ್ ನಡೆಸಿ ಫಾರೆಸ್ಟ್ ಗಾರ್ಡ್ ಬಸವೇಗೌಡ ಮೇಲೆ ದಾಳಿ ಮಾಡಿದೆ. ಹುಲಿಯ ಒಂದೇ ಹೊಡೆತಕ್ಕೆ ಅವರ ಕೈಗೆ ಗಂಭೀರ ಗಾಯವಾಗಿದೆ.
ಕಾರ್ಯಾಚರಣೆ ನಡೆಯುತ್ತಿದ್ದ ಸ್ಥಳದಲ್ಲಿ ಜನರ ಕೂಗಾಟ ಮತ್ತು ಗದ್ದಲ ಹೆಚ್ಚಿದ್ದರಿಂದ ಹುಲಿ ಇನ್ನಷ್ಟು ಆತಂಕಗೊಂಡಿತ್ತು. ಅರವಳಿಕೆ ಮದ್ದು ನೀಡಿದ ಬಳಿಕವೂ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿ ಇರಲಿಲ್ಲ ಎಂಬುದು ತಿಳಿದುಬಂದಿದೆ.
ಗಾಯಗೊಂಡ ಬಸವೇಗೌಡರನ್ನು ತಕ್ಷಣವೇ ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಒಟ್ಟಾರೆ, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ನಿಯಮ ಉಲ್ಲಂಘನೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಘಟನೆ ಅರಣ್ಯ ಇಲಾಖೆಯ ಮೇಲ್ವಿಚಾರಣೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ.
