Ashwaveega News 24×7 ಜನವರಿ 07: ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಹುಲಿ ಗಣತಿ ವೇಳೆ ಹುಲಿ ಕಳೇಬರ ಪತ್ತೆಯಾಗಿದೆ. ಹುಲಿ ಗಣತಿ ಹಾಗೂ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಗಂಗೆಗಿರಿ ಮೀಸಲು ಅರಣ್ಯ ಪ್ರದೇಶ, ಶಿರಗೋಳ ಗ್ರಾಮದ ಭಾಗದಲ್ಲಿ ಭಾರೀ ಗಾತ್ರದ ಹುಲಿ ಒಂದು ಸತ್ತು ಬಿದ್ದಿರುವುದು ಬೆಳಕಿಗೆ ಬಂದಿದೆ.
ಮೇಲ್ನೋಟಕ್ಕೆ ಎರಡು ಗಂಡು ಹುಲಿಗಳು ಹೊಡೆದಾಡಿಕೊಂಡು ಸಾವನ್ನಪ್ಪಿರುವುದಾಗಿ ಕಂಡುಬಂದಿದೆ. ಹುಲಿ ಕಳೇಬರವನ್ನು ಎನ್ಟಿಸಿಎ ಸದಸ್ಯರ ಸಮ್ಮುಖದಲ್ಲಿ ಪಶು ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿ ಮಾದರಿಗಳನ್ನು ಸಂಗ್ರಹಿಸಿದ್ದಾರೆ.
ಹೆಚ್ಚಿನ ತನಿಖೆಗಾಗಿ ಮಾದರಿ ಪರೀಕ್ಷಾ ಸಂಸ್ಥೆಗಳಿಗೆ ಕಳುಹಿಸಲು ತೀರ್ಮಾನಿಸಿ ಕಳೇಬರವನ್ನು ಸುಟ್ಟು ಹಾಕಲಾಗಿದೆ. ಹುಲಿಯ ಕುತ್ತಿಗೆ ಭಾಗದಲ್ಲಿ ಇನ್ನೊಂದು ಹುಲಿ ಹೊಡೆದಿರುವ ಉಗುರಿನ ಗುರುತುಗಳು ಪತ್ತೆಯಾಗಿವೆ.
ಎರಡು ಹುಲಿಗಳ ಕಾದಾಟದಲ್ಲಿ ಈ ಹುಲಿ ಸತ್ತಿದೆ ಎನ್ನಲಾಗ್ತಿದೆ. ಹುಲಿಯ ಉಗುರುಗಳು ಮತ್ತು ಹಲ್ಲುಗಳು ಹಾಗೇ ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
