Ashwaveega News 24×7 ಏಪ್ರಿಲ್ 8 – 2026 : ರಾಜ್ಯದಲ್ಲಿ ಸಾರಿಗೆ ಮುಷ್ಕರದ ಭೀತಿ ಮತ್ತೆ ಎದುರಾಗಿದೆ. ಸಾರಿಗೆ ನೌಕರರು ಸರ್ಕಾರದ ವಿರುದ್ಧ ಸಮರ ಸಾರಿದ್ದು, ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಇಂದಿನಿಂದಲೇ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗೆ ನೌಕರರು ಸಜ್ಜಾಗಿದ್ದಾರೆ. 38 ತಿಂಗಳ ಅರಿಯರ್ಸ್ ಪಾವತಿ, 2024ರ ಜನವರಿಯಿಂದ ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಚಿತ್ರದುರ್ಗದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ವರೆಗೆ ಪಾದಯಾತ್ರೆ ನಡೆಸುವ ಯೋಜನೆಯನ್ನು ಸಾರಿಗೆ ಸಿಬ್ಬಂದಿ ರೂಪಿಸಿದ್ದಾರೆ. ಜೊತೆಗೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಕೂಡ ಸಿದ್ಧತೆ ನಡೆಸಲಾಗಿದೆ.
ಸುಮಾರು ₹1970 ಕೋಟಿ ಹಿಂಬಾಕಿ ಬಿಡುಗಡೆ ಮಾಡುವಂತೆ ಹಾಗೂ 2024 ಜನವರಿಯಿಂದಲೇ ಹೊಸ ವೇತನ ಜಾರಿಗೆ ತರಬೇಕೆಂದು ನೌಕರರು ಪಟ್ಟು ಹಿಡಿದಿದ್ದಾರೆ.
ಇದರ ನಡುವೆಯೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮುಷ್ಕರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲಿ ಮುಷ್ಕರಕ್ಕೆ ಇಳಿಯುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.
ಸಾರಿಗೆ ನೌಕರರೊಳಗೆ ಹಲವು ಸಂಘಟನೆಗಳಿದ್ದು, ಪ್ರತ್ಯೇಕವಾಗಿ ಬೇಡಿಕೆಗಳನ್ನು ಮುಂದಿಟ್ಟಿರುವುದರಿಂದ ಸಮಸ್ಯೆ ಜಟಿಲವಾಗಿದೆ. ಆದರೆ ಸರ್ಕಾರ ಈಗಾಗಲೇ ನೌಕರರ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದು, ಮಾತುಕತೆಯ ಮೂಲಕವೇ ಅಂತಿಮ ನಿರ್ಧಾರಕ್ಕೆ ಬರಲು ಪ್ರಯತ್ನಿಸುತ್ತಿದೆ.
ಈ ಪರಿಸ್ಥಿತಿಯಲ್ಲಿ ಮುಷ್ಕರದ ಬದಲು ಸಂವಾದದ ಮಾರ್ಗವೇ ಸೂಕ್ತ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
