Ashwaveega News 24×7 ಫೆಬ್ರವರಿ 10 -2026 – ತಿರುಪತಿಯಲ್ಲಿ ಮದುವೆಗೆ ಇನ್ಮುಂದೆ ದಕ್ಷಿಣೆ ಇಲ್ಲ… ಹೌದು ತಿರುಪತಿ ತಿರುಮಲ ದೇವಸ್ಥಾನ ದೇವಸ್ಥಾನಂ (ಟಿಟಿಡಿ) ತಿಮ್ಮಪ್ಪನ ಭಕ್ತರಿಗೆ ಭಾರೀ ಸಿಹಿಸುದ್ದಿ ನೀಡಿದೆ. ಇನ್ಮುಂದೆ ತಿರುಪತಿಯಲ್ಲಿ ನಡೆಯುವ ವಿವಾಹ ಹಾಗೂ ಉಪನಯನ ಸಂಸ್ಕಾರಗಳಿಗೆ ದಕ್ಷಿಣೆ ನೀಡುವ ಅಗತ್ಯವೇ ಇಲ್ಲ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.
ಭಕ್ತರಿಗೆ ಅಗ್ಗದ ದರದಲ್ಲಿ ಧಾರ್ಮಿಕ ಸೇವೆ ಒದಗಿಸುವ ಉದ್ದೇಶದಿಂದ, ಟಿಟಿಡಿ ಕನಿಷ್ಠ ಶುಲ್ಕದಲ್ಲಿ ವಿವಾಹ, ಉಪನಯನ, ಚೌಲ, ಸತ್ಯನಾರಾಯಣ ಪೂಜೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಡಲು ಮುಂದಾಗಿದೆ .
ಈ ಸೇವೆಗಳು ತಿರುಮಲದ ಪಾಪ ವಿನಾಶನಂ ರಸ್ತೆಯಲ್ಲಿರುವ ಚೌಟ್ರಿಯಲ್ಲಿ ನಡೆಯಲಿದ್ದು, ಟಿಟಿಡಿ ನಿಯೋಜಿತ ಪುರೋಹಿತರ ಮೂಲಕವೇ ಸಮಾರಂಭಗಳು ನೆರವೇರಲಿವೆ.
ಟಿಟಿಡಿ ನೀಡಿರುವ ಪ್ರಮುಖ ಸ್ಪಷ್ಟನೆ ಏನೆಂದರೆ – ವಿವಾಹ ಸಂಪೂರ್ಣ ಉಚಿತ ,
ಪುರೋಹಿತರು ಯಾವುದೇ ದಕ್ಷಿಣೆ ಪಡೆಯುವುದಿಲ್ಲ ಆದರೆ,
1. ಅಡುಗೆ ವ್ಯವಸ್ಥೆ
2. ಹೂವಿನ ಅಲಂಕಾರ
3. ಇತರೆ ಮೂಲಸೌಕರ್ಯ ವ್ಯವಸ್ಥೆಗಳಿಗೆ ಮಾತ್ರ ಭಕ್ತರು ಹಣ ಪಾವತಿಸಬೇಕಾಗುತ್ತದೆ.
ಇದರಿಂದ ಮಧ್ಯಮ ವರ್ಗ ಹಾಗೂ ಬಡ ಕುಟುಂಬಗಳಿಗೂ ತಿರುಪತಿಯಲ್ಲೇ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿಕೊಳ್ಳಲು ಅವಕಾಶ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
“ಭಕ್ತರಿಗೆ ಕಡಿಮೆ ವೆಚ್ಚದಲ್ಲಿ, ಪಾರದರ್ಶಕವಾಗಿ ಸೇವೆ ಒದಗಿಸುವುದೇ ನಮ್ಮ ಉದ್ದೇಶ” ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ. ಈ ನಿರ್ಧಾರದಿಂದ ತಿಮ್ಮಪ್ಪನ ಭಕ್ತರಲ್ಲಿ ಸಂತಸ ಮನೆ ಮಾಡಿದ್ದು, ಟಿಟಿಡಿಯ ಈ ಹೆಜ್ಜೆ ಮಾದರಿ ಕ್ರಮವಾಗಿ ಮೆಚ್ಚುಗೆ ಪಡೆಯುತ್ತಿದೆ.
