Ashwaveega News 24×7 ಮಾರ್ಚ್ 20 – 2026 ಬಾಗಲಕೋಟೆ : ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕುರಿತು ಬಹಳ ದಿನಗಳಿಂದ ನಡೆಯುತ್ತಿದ್ದ ಚರ್ಚೆಗೆ ಈಗ ಅಂತ್ಯ ಕಂಡಂತಾಗಿದೆ. ಮಲ್ಲಿಕಾರ್ಜುನ್ ಮೇಟಿ ಅವರ ಬದಲಿಗೆ ಉಮೇಶ್ ಮೇಟಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸಚಿವ ಸತೀಶ್ ಜಾರಕಿಹೊಳಿ ಅವರ ತಂಡ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಮೀಕ್ಷೆಯಲ್ಲಿ ಕ್ಷೇತ್ರದ ಮತದಾರರು ಉಮೇಶ್ ಮೇಟಿ ಪರ ಒಲವು ತೋರಿರುವುದು ಸ್ಪಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.
ಇದೀಗ ಉಮೇಶ್ ಮೇಟಿಗೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಲು ಹೈಕಮಾಂಡ್ ಸೂಚನೆ ನೀಡಿದೆ. ಮಾರ್ಚ್ 23ರಂದು ನಾಮಪತ್ರ ಸಲ್ಲಿಸಲು ಕೂಡ ಸೂಚಿಸಲಾಗಿದೆ. ಇಂದು ಅಧಿಕೃತ ಘೋಷಣೆ ಹೊರಬರುವ ಸಾಧ್ಯತೆ ಇದೆ.
ಉಮೇಶ್ ಮೇಟಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಮುಂದಾಗಿದೆ. ಮಹದೇವಿ ಮೇಟಿ ಅವರ ಅಸಮಾಧಾನವನ್ನು ಶಮನಗೊಳಿಸುವ ಜೊತೆಗೆ ಒಳಗಟ್ಟಿನ ವಿರೋಧವನ್ನೂ ಕಡಿಮೆ ಮಾಡುವ ಯತ್ನ ಇದಾಗಿದೆ.
ಹಾಗೇ ಮಲ್ಲಿಕಾರ್ಜುನ್ ಮೇಟಿ ಹಾಗೂ ಬಾಯಕ್ಕ ಅವರಿಂದ ಹೆಚ್ಚಿನ ವಿರೋಧ ಎದುರಾಗುವ ಸಾಧ್ಯತೆ ಕಡಿಮೆ ಎಂದು ಪಕ್ಷದ ವಲಯದಲ್ಲಿ ಹೇಳಲಾಗುತ್ತಿದೆ. ಹೊಳಬಸು ಶೆಟ್ಟರ್ ವಿರುದ್ಧದ ಮಹದೇವಿ ಮೇಟಿ ಅವರ ಅಸಮಾಧಾನವನ್ನು ತಣಿಸಲು ಉಮೇಶ್ ಮೇಟಿ ಪ್ರಮುಖ ಅಸ್ತ್ರವಾಗಿದ್ದಾರೆ.
ಒಟ್ಟಿನಲ್ಲಿ, ಬಾಗಲಕೋಟೆ ಕಾಂಗ್ರೆಸ್ ರಾಜಕೀಯದಲ್ಲಿ ಹೊಸ ಸಮೀಕರಣಗಳು ಮೂಡಿಬರುತ್ತಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಕಣ್ಣು ನೆಟ್ಟಿದೆ.
