Ashwaveega News 24×7 ಮಾರ್ಚ್ 22 – 2026 : ವಾಷಿಂಗ್ಟನ್ : ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ತೆರೆಯುವಂತೆ ಅಮೆರಿಕ ಇರಾನ್ಗೆ 48 ಗಂಟೆಗಳ ಗಡುವು ನೀಡಿದೆ. ಈ ಗಡುವಿನೊಳಗೆ ಜಲಸಂಧಿಯನ್ನು ತೆರೆಯದಿದ್ದರೆ ಇರಾನ್ನ ಪ್ರಮುಖ ವಿದ್ಯುತ್ ಸ್ಥಾವರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂತಿಮ ಎಚ್ಚರಿಕೆ ನೀಡಿದ್ದಾರೆ.
ಜಾಗತಿಕ ತೈಲ ಸಾಗಾಟದ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯನ್ನು ಯಾವುದೇ ಶರತ್ತುಗಳಿಲ್ಲದೆ ಹಡಗು ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಅಮೆರಿಕ ಒತ್ತಾಯಿಸಿದೆ. ಇಲ್ಲವಾದರೆ ಇತಿಹಾಸದಲ್ಲೇ ಅತಿದೊಡ್ಡ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.
ಇದರ ಜೊತೆಗೆ, ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ತಕ್ಷಣವೇ ನಿಲ್ಲಿಸುವಂತೆ ಅಮೆರಿಕ ಸೇರಿ ಯುಎಇ, ಯುನೈಟೆಡ್ ಕಿಂಗ್ಡಮ್, ಫ್ರಾನ್ಸ್, ಜರ್ಮನಿ, ಕೆನಡಾ ಮತ್ತು ಜಪಾನ್ ಸೇರಿದಂತೆ ಒಟ್ಟು 22 ದೇಶಗಳು ಇರಾನ್ಗೆ ಎಚ್ಚರಿಕೆ ನೀಡಿವೆ.
ಈ ಬೆಳವಣಿಗೆ ಜಾಗತಿಕ ಮಟ್ಟದಲ್ಲಿ ಆತಂಕವನ್ನು ಹೆಚ್ಚಿಸಿದ್ದು, ವಿಶೇಷವಾಗಿ ತೈಲ ಮಾರುಕಟ್ಟೆ ಮತ್ತು ಮಧ್ಯಪ್ರಾಚ್ಯ ಪ್ರದೇಶದ ಭದ್ರತೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.
