ಈ ಮಧ್ಯೆ ಮೂಡಾ ಪ್ರಕರಣಕ್ಕೆ ಸಂಬಂಧಿಸಿಧಂತೆ ಲೋಕಾಯುಕ್ತ ತನಿಖೆ ಆರಂಭವಾಗಿದ್ದರೂ ಬಿಜೆಪಿ-ಜೆಡಿಎಸ್ ಮಿತ್ರಕೂಟದ ನಾಯಕರು ಈ.ಡಿ ಬಂದು ಪವಾಡ ಮಾಡಲಿದೆ ಎಂದು ನಿರೀಕ್ಷಿಸುತ್ತಿದ್ದಾರೆ.
ಸದ್ಯದ ಸ್ಥಿತಿಯಲ್ಲಿ ಲೋಕಾಯುಕ್ತ ತನಿಖೆಯ ಪ್ರೊಸೀಜರ್ರು ಸಿಎಂ ಸಿದ್ದರಾಮಯ್ಯ ಅವರನ್ನು ಮುಜುಗರಕ್ಕೆ ಸಿಲುಕಿಸುವುದು ಅನುಮಾನ. ಹೀಗಾಗಿ ಈ ಪ್ರಕರಣದಲ್ಲಿ ಈ.ಡಿ ಮಾತ್ರ ಈಟಿ ಪ್ರಯೋಗಿಸಬಹುದು ಎಂಬುದು ಮಿತ್ರಕೂಟದ ಹಲ ನಾಯಕರ ಲೆಕ್ಕಾಚಾರ. ಆದರೆ ಈ.ಡಿ ಬಂದು ಮಾಡುವುದೇನು? ಎಂಬ ವಿಷಯದಲ್ಲಿ ಯಾರಿಗೂ ಸ್ಪಷ್ಟತೆ ಇಲ್ಲ. ಒಂದು ವೇಳೆ ಮೂಡಾದಿಂದ ಪಡೆದ ಹದಿನಾಲ್ಕು ನಿವೇಶನಗಳನ್ನು ಸಿದ್ದರಾಮಯ್ಯ ಅವರ ಪತ್ನಿ ಹಿಂತಿರುಗಿಸದೆ ಇದ್ದರೆ, ಪ್ರಕರಣಕ್ಕೆ ಎಂಟ್ರಿ ಪಡೆದಿರುವ ಈ.ಡಿ ನಿಶ್ಚಿತವಾಗಿ ಆ ನಿವೇಶನಗಳನ್ನು ಸೀಝ್ ಮಾಡಿಕೊಳ್ಳುತ್ತಿತ್ತು.

ಹೀಗೆ ಈ.ಡಿ ಇಂತಹ ಕೆಲಸ ಮಾಡಿದ್ದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಜುಗರಕ್ಕೆ ಸಿಲುಕುತ್ತಿದ್ದರು. ಇಲ್ಲ, ತಮ್ಮ ಪತ್ನಿಯ ಹೆಸರಿನಲ್ಲಿದ್ದ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ಕಾರಣಕ್ಕಾಗಿ ಮೂಡಾ ಈ ನಿವೇಶನಗಳನ್ನು ನೀಡಿದೆ. ಅದೂ ಬಿಜೆಪಿ ಸರ್ಕಾರ ಇದ್ದ ಅವಧಿಯಲ್ಲಿ ನೀಡಿದೆ ಅಂತ ಸಿದ್ದರಾಮಯ್ಯ ಹೇಳಿಕೊಂಡರೂ ಈ.ಡಿ ಯ ಕ್ರಮ ಅವರನ್ನು ಮುಜುಗರಕ್ಕೆ ಸಿಲುಕಿಸುತ್ತಿತ್ತು. ಹೀಗಾಗಿಯೇ ಈ ಅಂಶವನ್ನು ಬೊಟ್ಟು ಮಾಡಿ ತೋರಿಸಿದ್ದ ಖ್ಯಾತ ನ್ಯಾಯವಾದಿ ಕಪಿಲ್ ಸಿಬಲ್ ಅವರು ನ್ಯಾಯ ಸಿಎಂ ಪತ್ನಿಯ ಪರವಾಗಿದೆ ಎಂಬುದು ಬೇರೆ ಮಾತು.ಅದೇ ರೀತಿ ಮುಂದಿನ ದಿನಗಳಲ್ಲಿ ನ್ಯಾಯ ಕೋರಿ ಮೂಡಾದಿಂದ ಪರಿಹಾರ ಕೋರಿ ಸಿದ್ದರಾಮಯ್ಯ ಅವರ ಪತ್ನಿ ನ್ಯಾಯಾಲಯದ ಮೊರೆ ಹೋಗಬಹುದು.
ಆದರೆ ಈಗ ತಕ್ಷಣದ ದೃಷ್ಟಿಯಿಂದ, ಈ.ಡಿ ಹೆಚ್ಚಿನದನ್ನೇನೂ ಮಾಡಬಾರದು ಎಂಬ ಕಾರಣಕ್ಕಾಗಿ ನಿವೇಶನಗಳನ್ನು ಮೂಡಾಗೆ ಹಿಂತಿರುಗಿಸುವುದು ಒಳ್ಳೆಯದು. ಆ ಮೂಲಕ ಸಿದ್ದರಾಮಯ್ಯ ಅವರನ್ನು ಮುಜುಗರದಿಂದ ಪಾರು ಮಾಡಬಹುದು ಎಂಬ ಸಂದೇಶ ರವಾನಿಸಿದ್ದರಂತೆ. ಹೀಗಾಗಿ ಸಿದ್ದರಾಮಯ್ಯ ಅವರ ಪತ್ನಿ ನಿವೇಶನಗಳನ್ನು ಮೂಡಾಗೆ ಹಿಂತಿರುಗಿಸಿದರು ಎಂಬುದು ಕೈ ಪಾಳಯದ ಮಾತು. ಅಷ್ಟೇ ಅಲ್ಲ. ಈಗ ಮೂಡಾ ಪ್ರಕರಣದಲ್ಲಿ ಈ.ಡಿ ಬಂದು ಮಾಡುವುದೇನು? ಎಂಬುದು ಅದರ ಪ್ರಶ್ನೆ. ಅದರ ಪ್ರಕಾರ, ಮೂಡಾ ಪ್ರಕರಣದ ಕಾವು ಕಡಿಮೆಯಾಗಿದೆಯಷ್ಟೇ ಅಲ್ಲ. ಸಿದ್ದರಾಮಯ್ಯ ಅವರ ಖುರ್ಚಿಯೂ ಗಟ್ಟಿಯಾಗಿದೆ.

ಮಂಗಳೂರು ಚೌಟಾ-ಕಟೀಲ್ ಕದನ ಅಂದ ಹಾಗೆ ಹಿಂದುತ್ವದ ಪ್ರಯೋಗ ಶಾಲೆ ಅನ್ನಿಸಿಕೊಂಡ ಮಂಗಳೂರಿನಲ್ಲಿ ಹಾಲಿ ಸಂಸದ ಬ್ರಿಜೇಶ್ ಚೌಟಾ ಮತ್ತು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನಡುವಣ ಶೀತಲ ಸಮರಕ್ಕೆ ಸಂಘಪರಿವಾರ ಸುಸ್ತಾಗಿದೆ. ಹಿಂದೆಲ್ಲ ಸ್ಥಳೀಯ ನಾಯಕರನ್ನು ನಿಯಂತ್ರಿಸುತ್ತಿದ್ದ ಜಿಲ್ಲೆಯ ಆರೆಸ್ಸೆಸ್ ಘಟಕ ಈಗ ಎರಡು ಬಣಗಳಾಗಿ ನಿಂತಿದೆ. ಈ ಪೈಕಿ ಒಂದು ಬಣ ಸಂಸದ ಬ್ರಿಜೇಶ್ ಚೌಟಾ ಜತೆಗಿದ್ದರೆ, ಮತ್ತೊಂದು ಬಣ ನಳೀನ್ ಕುಮಾರ್ ಕಟೀಲ್ ಬೆನ್ನಿಗಿದೆ. ಮೂಲಗಳ ಪ್ರಕಾರ, ನಳೀನ್ಕುಮಾರ್ ಕಟೀಲ್ ಸಂಸದರಾಗಿದ್ದಾಗ ಜಿಲ್ಲೆಯ ಬಿಜೆಪಿ ಕಾರ್ಯಚಟುವಟಿಕೆಗಳಲ್ಲಿ ಚೌಟಾ ಅವರನ್ನು ನಿರ್ಲಕ್ಷಿಸಿದ್ದರು.
ಅವತ್ತಿನ ನೋವನ್ನು ಮನಸ್ಸಿನಲ್ಲಿಟ್ಟು ಕೊಂಡಿರುವ ಬ್ರಿಜೇಶ್ ಚೌಟಾ ಈಗ ನಳೀನ್ ಕುಮಾರ್ ಕಟೀಲ್ ಅವರನ್ನು ಪಕ್ಷದ ಚಟುವಟಿಕೆಗಳಿಂದ ದೂರವಿಡುತ್ತಿದ್ದಾರೆ. ಇಷ್ಟಾದರೂ ಸಂಘಪರಿವಾರದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಕಟಾಕ್ಷವಿರುವ ಕಾರಣಕ್ಕಾಗಿ ಸ್ಥಳೀಯ ಆರೆಸ್ಸೆಸ್ ನ ಒಂದು ಬಣ ಕಟೀಲರ ಹಿಂದೆ ನಿಂತಿದೆ.ಉಳಿದಂತೆ ವಿಜಯೇಂದ್ರ ಪ್ಲಸ್ ಕಲ್ಲಡ್ಕ ಪ್ರಭಾಕರ ಭಟ್ಟರ ಕಟಾಕ್ಷ ಇರುವ ಕಾರಣಕ್ಕಾಗಿ ಚೌಟಾ ಅವರ ಬೆನ್ನಿಗೆ ಪಕ್ಷ ಮತ್ತು ಸಂಘಪರಿವಾರದ ಒಂದು ಬಣ ನಿಂತಿದೆ. ಹೀಗೆ ಚೌಟಾ ಮತ್ತು ಕಟೀಲರ ನಡುವೆ ಪ್ರಾರಂಭವಾಗಿರುವ ಶೀತಲ ಸಮರದಲ್ಲಿ ಕಟೀಲ್ ಒಂದಷ್ಟು ಪ್ರತಿರೋಧ ತೋರುತ್ತಿದ್ದಾರಾದರೂ ಅದು ಎಷ್ಟು ದಿನ ನಡೆಯುತ್ತದೋ ಗೊತ್ತಿಲ್ಲ.
ಕಾರಣ? ಸಂತೋಷ್ ಇವತ್ತು ರಾಷ್ಟ್ರ ಮಟ್ಟದಲ್ಲಿ ಪ್ರಬಲರಾಗಿರುವುದರಿಂದ ಕಟೀಲ್ ಅವರಿಗೆ ಸ್ವಲ್ಪ ಶಕ್ತಿ ಇದೆ.

ಆದರೆ ಸಂತೋಷ್ ಅವರ ಪವರ್ ಕಡಿಮೆಯಾದರೆ ನೋ ಡೌಟ್,ಹಾಲಿ ಸಂಸದ ಬ್ರಿಜೇಶ್ ಚೌಟಾ ಪವರ್ ಹೆಚ್ಚಾಗುತ್ತದೆ. ಹಾಗೇನಾದರೂ ಆದರೆ ಕಟೀಲರು ಅಜ್ಞಾತವಾಸಕ್ಕೆ ತೆರಳಬಹುದು ಎಂಬುದು ಲೋಕಲ್ ಬಿಜೆಪಿಗರ ಮಾತು. ಮುಂದೇನಾಗುತ್ತದೋ? ಇಂಟರೆಸ್ಟಿಂಗ್ ಸಂಗತಿ ಎಂದರೆ ಮಂಗಳೂರಿನ ರಾಜಕಾರಣ ಬಿಜೆಪಿಯನ್ನು ಹೋಳು ಮಾಡಿದ್ದು ಒಂದು ಕಡೆಯಾದರೆ, ಮತ್ತೊಂದು ಕಡೆ ಆಡಳಿತಾರೂಢ ಕಾಂಗ್ರೆಸ್ ನ ಕತೆಯೂ ಹಾಗೇ ಆಗಿದೆ. ಅರ್ಥಾತ್, ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ನೇತೃತ್ವದ ಬಣ ಒಂದು ಕಡೆ ಇದ್ದರೆ, ಮಿಥುನ್ ರೈ, ರಮಾನಾಥ ರೈ, ಮಂಜುನಾಥ ಭಂಡಾರಿ ಸೇರಿದಂತೆ ಪ್ರಮುಖರ ಬಣ ಮತ್ತೊಂದು ಕಡೆ ನಿಂತಿದೆ. ಈ ಎರಡು ಬಣಗಳ ನಡುವಣ ಹಾಲಿ ಕಾದಾಟಕ್ಕೆ ಮುಖ್ಯ ಕಾರಣ ಸರ್ಕಾರಿ ನೌಕರರ ವರ್ಗಾವಣೆ ಮತ್ತು ಆಡಳಿತಾತ್ಮಕ ವಿಷಯ. ಈ ವಿಷಯದಲ್ಲಿ ಯು.ಟಿ.ಖಾದರ್ ಮೇಲುಗೈ ಸಾಧಿಸಿರುವುದು ಸಹಜವಾಗಿಯೇ ಮತ್ತೊಂದು ಬಣದವರನ್ನು ಕೆರಳಿಸಿದೆ. ಹೀಗಾಗಿ ಜಿಲ್ಲೆಯ ರಾಜಕಾರಣದಲ್ಲಿ ಶುರುವಾಗಿರುವ ಉಭಯ ಬಣಗಳ ಕಚ್ಚಾಟ ಸಧ್ಯದಲ್ಲೇ ಕೈ ಪಾಳಯಕ್ಕೆ ತಲೆನೋವಾಗುವುದು ನಿಶ್ಚಿತವಾಗಿದೆ.