Ashwaveega News 24×7 ಫೆಬ್ರವರಿ 06 -2026 – ಬೆಳಗಾವಿ : ಮಹಿಳಾ ಅಧಿಕಾರಿಯ ಖಾಸಗಿ ಕ್ಷಣಗಳನ್ನು ಸೀಕ್ರೆಟ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ ಗಂಭೀರ ಪ್ರಕರಣ ಬೆಳಗಾವಿ ಮಾಳ ಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಮಹಿಳಾ ಅಧಿಕಾರಿ ಮನೆ ಒಳಗಿನ ಬೆಡ್ರೂಂ ಹಾಗೂ ಹಾಲ್ನ ಲೈಟ್ ಬಲ್ಬ್ ಹೋಲ್ಡರ್ಗಳಲ್ಲಿ ಸಣ್ಣ ಕ್ಯಾಮೆರಾಗಳನ್ನು ಅಳವಡಿಸಿ, ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಈ ವಿಡಿಯೋಗಳನ್ನು ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ ₹50 ಲಕ್ಷ ಹಣಕ್ಕೆ ಬೇಡಿಕೆ ಇಡಲಾಗಿದೆ.
ಪ್ರಕರಣದಲ್ಲಿ ಯೂಟ್ಯೂಬ್ ಗ್ಯಾಂಗ್ ಸದಸ್ಯರು ಮಹಿಳಾ ಅಧಿಕಾರಿಯ ಮನೆಕೆಲಸದವನ ಸಹಾಯ ಪಡೆದಿದ್ದಾರೆ ಎಂಬ ಅಂಶ ತನಿಖೆಯಲ್ಲಿ ಪತ್ತೆಯಾಗಿದೆ. ಮಹಿಳಾ ಅಧಿಕಾರಿ ಕೆಲ ಸಂದರ್ಭಗಳಲ್ಲಿ ಮನೆಯ ಕೀ ಅನ್ನು ಕಿಟಕಿಯಲ್ಲಿ ಇಟ್ಟು ಹೋಗುತ್ತಿದ್ದರು. ಈ ಮಾಹಿತಿ ಮನೆಕೆಲಸದವನಿಗೆ ಮಾತ್ರ ತಿಳಿದಿತ್ತು .
ಗ್ಯಾಂಗ್ ಸದಸ್ಯರು ಮನೆಕೆಲಸದವನಿಗೆ ಹಣ ನೀಡುವ ಆಮಿಷ ಒಡ್ಡಿ, ಮನೆ ಕೀ ಇಟ್ಟಿರುವ ಸಂದರ್ಭದ ಮಾಹಿತಿ ನೀಡುವಂತೆ ಸೂಚಿಸಿದ್ದರು. ಪ್ಲಾನ್ನಂತೆ ಮಾಹಿತಿ ಸಿಗುತ್ತಿದ್ದಂತೆಯೇ ಆರೋಪಿಗಳು ಮಹಿಳಾ ಅಧಿಕಾರಿಯ ಮನೆಗೆ ಪ್ರವೇಶಿಸಿ, ಲೈಟ್ ಹೋಲ್ಡರ್ಗಳಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿದ್ದಾರೆ.
ನಂತರ ಕ್ಯಾಮೆರಾದಲ್ಲಿ ಸೆರೆಸಿಕ್ಕ ದೃಶ್ಯಗಳನ್ನು ಆಧರಿಸಿ, ಮಹಿಳಾ ಅಧಿಕಾರಿಗೆ ಹಣ ನೀಡದಿದ್ದರೆ , ವಿಡಿಯೋಗಳನ್ನು ಸಾರ್ವಜನಿಕವಾಗಿ ಹರಡುವುದಾಗಿ ಬೆದರಿಕೆ ಹಾಕಲಾಗಿದೆ. ಬ್ಲ್ಯಾಕ್ಮೇಲ್ಗೆ ಬೇಸತ್ತ ಮಹಿಳಾ ಅಧಿಕಾರಿ ಪೊಲೀಸ್ ಕಮಿಷನರ್ಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಸಮೀರ್ ಅಹ್ಮದ್, ಅಬ್ಬುಲ್ ರಶೀದ್, ಮೊಹಮ್ಮದ್ ಎಂಬ ಮೂವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದ ಮನೆಕೆಲಸದವನು ಪರಾರಿಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಈ ಪ್ರಕರಣ ಮಹಿಳೆಯರ ಭದ್ರತೆ ಮತ್ತು ಖಾಸಗಿತನದ ವಿಚಾರದಲ್ಲಿ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದು, ಇಂತಹ ಅಪರಾಧಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
