ಬೆಂಗಳೂರು: ರಾಜ್ಯದಲ್ಲಿ ಡೆಂಘೀ ಜೊತೆಗೆ ಜೀಕಾ ವೈರಸ್ ಪ್ರಕರಣಗಳು ಕೂಡ ಹೆಚ್ಚಳ ಕಂಡುಬರುತ್ತಿದ್ದು, ಈ ತಿಂಗಳಲ್ಲಿ ಏಳು ಜನರಲ್ಲಿ ಜೀಕಾ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆ ರಾಜ್ಯದ ಜನತೆಗೆ ಹೆಚ್ಚಿನ ಮುನ್ನಚ್ಚರಿಕೆ ವಹಿಸುವಂತೆ ಎಚ್ಚರಿಕೆ ನೀಡಿದೆ.
ಜೀಕಾ ವೈರಸ್, ಈಡಿಸ್ ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಸೋಂಕಿನ ಲಕ್ಷಣಗಳು ಸಾಮಾನ್ಯವಾಗಿ 2-7 ದಿನಗಳ ಅವಧಿಯಲ್ಲಿ ಕಾಣಿಸಿಕೊಳ್ಳುತ್ತವೆ. ಜ್ವರ, ಕೆಂಪಾದ ಕಣ್ಣು, ತಲೆನೋವು, ಸ್ನಾಯು ಹಾಗೂ ಕೀಲುಗಳಲ್ಲಿ ನೋವು, ಮತ್ತು ಗಂಧೆಗಳು ಪ್ರಮುಖ ಲಕ್ಷಣಗಳಾಗಿವೆ.
ಹೀಗಾಗಿ, ಮನೆಯ ಒಳಾಂಗಣ ಮತ್ತು ಹೊರಾಂಗಣಗಳಲ್ಲಿ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈಡಿಸ್ ಸೊಳ್ಳೆಗಳ ಲಾರ್ವಾಗಳನ್ನು ನಿರ್ವಹಿಸುವುದು ಅತ್ಯಂತ ಅಗತ್ಯವಾಗಿದೆ. ಜೀಕಾ ವೈರಸ್ ಸೋಂಕಿನ ಶಂಕೆ ಇರುವ ವ್ಯಕ್ತಿಗಳ ಸೀರಂ ಮಾದರಿಗಳನ್ನು ಎನ್ಐವಿ (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ) ಗೆ ಜೀಕಾ ಪರೀಕ್ಷೆಗೆ ರವಾನಿಸಬೇಕು. ಜೊತೆಗೆ, ಸೋಂಕಿತರ ಕುಟುಂಬಸ್ಥರ ಸೀರಂ ಮಾದರಿಗಳನ್ನೂ ಪರೀಕ್ಷೆಗೆ ಕಳುಹಿಸುವಂತೆ ಸೂಚಿಸಲಾಗಿದೆ.
ಸೋಂಕು ದೃಢಪಟ್ಟ ಸ್ಥಳವನ್ನು ಸುತ್ತಲಿನ 3 ಕಿ.ಮೀ. ವ್ಯಾಪ್ತಿಯು ‘ಕಂಟೇನ್ಮೆಂಟ್ ವಲಯ’ವೆಂದು ಗುರುತಿಸಲಾಗುವುದು. ಜೀಕಾ ವೈರಸ್ ಸಾಮಾನ್ಯವಾಗಿ ಸೌಮ್ಯ ಸ್ವರೂಪದಲ್ಲಿ ಇರಿದರೂ, ಆರೋಗ್ಯ ಇಲಾಖೆಯು ತುರ್ತು ಕಾರ್ಯಚರಣೆ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಜೀಕಾ ವೈರಸ್ನಿಂದ ಮರಣ ಪ್ರಕರಣಗಳು ಅತ್ಯಂತ ವಿರಳವಾಗಿರುವುದಾಗಿ ತಿಳಿಸಲಾಗಿದೆ.