
Ashwaveega News 24×7 ಸೆ. 11: ಕನ್ನಡ ಚಿತ್ರರಂಗದಲ್ಲಿ ಜೀವಮಾನ ಸೇವೆಯನ್ನು ಪರಿಗಣಿಸಿದ ರಾಜ್ಯ ಸರ್ಕಾರ ನಟ ಡಾ.ವಿಷ್ಣುವರ್ಧನ್ ಹಾಗೂ ಇತ್ತೀಚೆಗೆ ಇಹಲೋಕ ತ್ಯಜಿಸಿದ ನಟಿ ಬಿ. ಸರೋಜಾದೇವಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.
ಇಬ್ಬರಿಗೂ ಮರಣೋತ್ತರ ಪ್ರಶಸ್ತಿ ನೀಡಲಾಗುತ್ತದೆ. ಜೊತೆಗೆ, ಕನ್ನಡದ ರಾಷ್ಟ್ರಕವಿ ಕುವೆಂಪು ಅವರಿಗೆ ಭಾರತರತ್ನ ಪ್ರಶಸ್ತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವುದಕ್ಕೆ ರಾಜ್ಯ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ರಾಜ್ಯದ ಎಲ್ಲ ಸಿನಿಮಾ ಗಣ್ಯರಿಂದ ವಿಷ್ಣುವರ್ಧನ್ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಒತ್ತಾಯ ಕೇಳಿಬಂದಿತ್ತು. ಕಳೆದೊಂದು ತಿಂಗಳಿಂದ ವಿಷ್ಣುವರ್ಧನ್ಗೆ ಕರ್ನಾಟಕ ಪ್ರಶಸ್ತಿ ನೀಡಲೇಬೇಕು ಎಂದು ನೂರಕ್ಕೂ ಅಧಿಕ ಹಿರಿಯ ಕಲಾವಿದರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಿದ್ದರು.
ಇತ್ತೀಚೆಗೆ ಬೆಂಗಳೂರಿನ ಅಭಿಮಾನ್ ಸ್ಟೂಡಿಯೋದಲ್ಲಿದ್ದ ವಿಷ್ಣುವರ್ಧನ್ ಸ್ಮಾರಕವನ್ನು ರಾತ್ರೋರಾತ್ರಿ ತೆರವು ಮಾಡಲಾಗಿದ್ದರಿಂದ, ಅಭಿಮಾನಿಗಳ ಆಕ್ರೋಶ ಕಟ್ಟೆ ಒಡೆದಿತ್ತು. ಅಭಿಮಾನ್ ಸ್ಟೂಡಿಯೋದಲ್ಲಿ 20 ಅಡಿ ಜಾಗ ಕೊಡದ ಸರ್ಕಾರದ ವಿರುದ್ಧ ವಿಷ್ಣುವರ್ಧನ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಇದೀಗ ಸಾಹಸಸಿಂಹ ವಿಷ್ಣುವರ್ಧನ್ಗೆ ಕರ್ನಾಟಕ ಪ್ರಶಸ್ತಿ ನೀಡುವ ಮೂಲಕ ಎಲ್ಲರ ಆಕ್ರೋಶ ತಣಿಸುವ ಕಾರ್ಯಕ್ಕೆ ಮುಂದಾಗಿದೆ.