ಬೆಂಗಳೂರು, 12 ಆಗಸ್ಟ್ 2024: ಇತ್ತೀಚೆಗೆ ಇಲ್ಲೊಂದು, ಅಲ್ಲೊಂದು ಮಳೆ ಬಂದು ಮರೆಯಾಗುತ್ತಿದ್ದ ಮಳೆರಾಯ, ನಿನ್ನೆ ಮಧ್ಯರಾತ್ರಿ ಬೆಂಗಳೂರಿನಲ್ಲಿ ಭಾರಿ ಅಬ್ಬರ ಮಾಡಿ ಬೊಬ್ಬಿರಿದಿದ್ದಾನೆ. ಸುಮಾರು 2 ಗಂಟೆಗೆ ಆರಂಭವಾದ ಮಳೆ, ಎರಡು ಮೂರು ಗಂಟೆಗಳ ಕಾಲ ಬಿಟ್ಟು ಬಿಡದೆ ಗುಡುಗು ಸಹಿತ ಸುರಿದು, ನಗರದ ಅನೇಕ ಭಾಗಗಳು ಸಂಪೂರ್ಣ ಜಲಾವೃತವಾಗಿವೆ.
ಕೆ.ಆರ್.ಮಾರ್ಕೆಟ್, ಜೆ.ಸಿ.ರೋಡ್, ಕಾಮಾಕ್ಷಿಪಾಳ್ಯ ಸೇರಿದಂತೆ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಿದೆ. ಈ ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿ ಹೋಗಿ, ವಾಹನ ಸವಾರರು ಸಂಚರಿಸಲಾಗದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಲ್ಲೇಶ್ವರಂನಲ್ಲಿ ಬೃಹತ್ ಮರ ಧರೆಗೆ ಉರುಳಿದ ದುರಂತ
ಬೆಳಗಿನ ಜಾವ ಸುರಿದ ಭಾರಿ ಮಳೆಯ ಪರಿಣಾಮ, ಮಲ್ಲೇಶ್ವರಂನ ಕ್ಲೌಡ್ ನೈನ್ ಆಸ್ಪತ್ರೆಗೆ ಸಮೀಪದ ರಸ್ತೆಯಲ್ಲಿ ಬೃಹತ್ ಮರ ಧರೆಗೆ ಉರುಳಿದೆ. ಎರಡು ಸೀಳುಗಳಾಗಿ ಮುರಿದು ರಸ್ತೆಗೆ ಬಿದ್ದ ಈ ಮರದಿಂದಾಗಿ, ಆ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ನಗರದ ಹಲವೆಡೆ ಮಳೆಯ ಹಾನಿ ಹಾಗೂ ನೀರು ತುಂಬಿದ ರಸ್ತೆಗಳು ಸಾರ್ವಜನಿಕರ ಜೀವನಕ್ಕೆ ತೀವ್ರ ತೊಂದರೆ ಉಂಟುಮಾಡಿವೆ.