“ನಾವು ವಾಕ್ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಲ್ಲಿ ಮೊದಲಿಗರು. ಆದರೆ ಕೆಲವು ಸಂದರ್ಭಗಳಲ್ಲಿ ಸ್ವಯಂ ಸಂಯಮ ಇರಬೇಕು. ಐಎಂಎ ಅಧ್ಯಕ್ಷರಾಗಿ, ನೀವು ಸ್ವಯಂ ಸಂಯಮವನ್ನು ಹೊಂದಿರಬೇಕು. ನಿಮ್ಮ ಸಂದರ್ಶನದಲ್ಲಿ ನಾವು ಅದನ್ನು ನೋಡಲಿಲ್ಲ.” ಎಂದು ನ್ಯಾಯಮೂರ್ತಿ ಕೊಹ್ಲಿ ಐಎಂಎ ಅಧ್ಯಕ್ಷ ಡಾ.ಆರ್.ವಿ.ಅಶೋಕನ್ ವಿರುದ್ಧ ಗರಂ ಆಗಿದ್ದಾರೆ.
ದೆಹಲಿ ಮೇ 14: ಭಾರತೀಯ ವೈದ್ಯಕೀಯ ಸಂಘದ (IMA) ಅಧ್ಯಕ್ಷರ ಸಂದರ್ಶನವೊಂದರಲ್ಲಿ ಹೇಳಿಕೆಗಾಗಿ ತೀವ್ರವಾಗಿ ಟೀಕಿಸಿರುವ ಸುಪ್ರೀಂ ಕೋರ್ಟ್, ವಾಕ್ ಸ್ವಾತಂತ್ರ್ಯವನ್ನು ಎತ್ತಿಹಿಡಿಯಬೇಕಾಗಿದ್ದರೂ “ಸ್ವಯಂ ಸಂಯಮ ಬೇಕು” ಎಂದು ಹೇಳಿದೆ. ಯೋಗ ಗುರು ಬಾಬಾ ರಾಮ್ದೇವ್ (Baba Ramdev) ಮತ್ತು ಅವರ ಸಹಾಯಕ ಬಾಲಕೃಷ್ಣ ಸ್ಥಾಪಿಸಿದ ಪತಂಜಲಿ (Patanjali) ಆಯುರ್ವೇದ್ ವಿರುದ್ಧದ ತಪ್ಪುದಾರಿಗೆಳೆಯುವ ಜಾಹೀರಾತು ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪಿನ ಕುರಿತು ಸಂದರ್ಶನವೊಂದರಲ್ಲಿ ತಮ್ಮ ಹೇಳಿಕೆಗಳಿಗಾಗಿ ಐಎಂಎ ಅಧ್ಯಕ್ಷ ಡಾ.ಆರ್.ವಿ.ಅಶೋಕನ್ ಅವರ ವಿರುದ್ಧ ಸುಪ್ರೀಂಕೋರ್ಟ್ ಗರಂ ಆಗಿದೆ. ಪತಂಜಲಿ ಉತ್ಪನ್ನಗಳು ತಪ್ಪುದಾರಿಗೆಳೆಯುತ್ತಿದೆ ಎಂಬ ಆರೋಪಪದಲ್ಲಿ ಐಎಂಎ ಅರ್ಜಿದಾರರಾಗಿದ್ದಾರೆ. ಮಂಗಳವಾರ ಅಶೋಕನ್ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಎ ಅಮಾನುಲ್ಲಾ ಅವರ ಪೀಠ, “ನಾವು ನಿಮ್ಮಿಂದ ಹೆಚ್ಚಿನ ಜವಾಬ್ದಾರಿಯನ್ನು ನಿರೀಕ್ಷಿಸುತ್ತಿದ್ದೆವು. ನೀವು ಈ ರೀತಿ ಪತ್ರಿಕಾ ಮಾಧ್ಯಮಗಳಲ್ಲಿ ನ್ಯಾಯಾಲಯದ ವಿರುದ್ಧ ನಿಮ್ಮ ಭಾವನೆಗಳನ್ನು ಹೊರಹಾಕಲು ಸಾಧ್ಯವಿಲ್ಲ. ನೀವು ಇದ್ದಕ್ಕಿದ್ದಂತೆ ಹೀಗೆ ಮಾಡಿದ್ದು ಯಾಕೆ? ಎಂದು ಕೇಳಿದೆ.
ಈ ವಿಷಯದಲ್ಲಿಅಶೋಕನ್ ಅವರು ಬೇಷರತ್ ಕ್ಷಮೆಯಾಚಿಸಿದರು. ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಕೊಹ್ಲಿ, ‘ಇಂತಹ ಹಾನಿಕಾರಕ ಹೇಳಿಕೆಗಳ ನಂತರ ನಾವು ನಿಮ್ಮ ಹೇಳಿಕೆಗಳನ್ನು ಒಪ್ಪಿಕೊಳ್ಳಬೇಕೇ, ಅವರು ನಿಮ್ಮನ್ನು ಅವಹೇಳನ ಮಾಡುತ್ತಿದ್ದಾರೆ ಎಂದು ಇನ್ನೊಂದು ಕಡೆಯನ್ನು ನ್ಯಾಯಾಲಯಕ್ಕೆ ಎಳೆದು ತಂದವರು ನೀವು, ಆದರೆ ನಿಮ್ಮನ್ನು ಪರೀಕ್ಷೆಗೆ ಒಳಪಡಿಸಿದಾಗ…?
ಏತನ್ಮಧ್ಯೆ ಅಫಿಡವಿಟ್ನಿಂದ ಸಂತೋಷವಾಗಿಲ್ಲ ಎಂದು ಪೀಠವು ಹೇಳಿದೆ. ಅವರು ಸಾರ್ವಜನಿಕ ಕ್ಷಮೆಯಾಚನೆಯನ್ನು ಏಕೆ ನೀಡಲಿಲ್ಲ ಎಂದು ಪ್ರಶ್ನಿಸಿದ ನ್ಯಾಯಾಲಯ, “ಎಲ್ಲವನ್ನೂ ಸ್ಪಷ್ಟವಾಗಿ ಬರೆಯಲಾಗಿದೆ, ನೀವು ನಿಜವಾಗಿಯೂ ಕ್ಷಮೆಯಾಚಿಸಲು ಬಯಸಿದರೆ ನೀವು ಸಂದರ್ಶನದ ನಂತರ ಯಾಕೆ ತಿದ್ದಿಕೊಳ್ಳಲಿಲ್ಲ? ಎಂಬುದನ್ನು ಹೇಳಿ ಎಂದು ನ್ಯಾಯಾಲಯ ಕೇಳಿದೆ,