IPL 2024: ಮೇ.22 ರಿಂದ ಇಂಗ್ಲೆಂಡ್ ಮತ್ತು ಪಾಕಿಸ್ತಾನ್ ನಡುವೆ 4 ಪಂದ್ಯಗಳ ಟಿ20 ಸರಣಿ ಶುರುವಾಗಲಿದೆ. ಈ ಸರಣಿಗೆ ಆಯ್ಕೆಯಾಗಿರುವ ಇಂಗ್ಲೆಂಡ್ ತಂಡ ಆಟಗಾರರು ಇದೀಗ ಐಪಿಎಲ್ ತೊರೆದು ತವರಿಗೆ ಮರಳಿದ್ದಾರೆ. ಅದರಂತೆ ಆರ್ಸಿಬಿ ತಂಡದಿಂದ ವಿಲ್ ಜಾಕ್ಸ್ ಹಾಗೂ ರೀಸ್ ಟೋಪ್ಲಿ ಹೊರ ನಡೆದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17ರ ಮುಕ್ತಾಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಇಬ್ಬರು ಇಂಗ್ಲೆಂಡ್ ಆಟಗಾರರು ತವರಿಗೆ ಮರಳಿದ್ದಾರೆ. ಅದರಂತೆ ಆರ್ಸಿಬಿ ತಂಡದ ಮುಂದಿನ ಪಂದ್ಯಗಳಿಗೆ ವಿಲ್ ಜಾಕ್ಸ್ (Will Jacks) ಹಾಗೂ ರೀಸ್ ಟೋಪ್ಲಿ ಅಲಭ್ಯರಾಗಲಿದ್ದಾರೆ.
ಇಲ್ಲಿ ವಿಲ್ ಜಾಕ್ಸ್ ಕಳೆದ 8 ಪಂದ್ಯಗಳಿಂದ ಆರ್ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್ನ ಭಾಗವಾಗಿದ್ದರು. ಇದೀಗ ಅವರ ಅಲಭ್ಯತೆಯು ಆರ್ಸಿಬಿ ತಂಡದ ಮೇಲೆ ಪ್ರಭಾವ ಬೀರಲಿದೆ. ಅದರಲ್ಲೂ ಜಾಕ್ಸ್ ಬದಲಿಗೆ ಆರ್ಸಿಬಿ ಯಾರನ್ನು ಕಣಕ್ಕಿಳಿಸಲಿದೆ ಎಂಬುದೇ ಪ್ರಶ್ನೆ.
ಈ ಪ್ರಶ್ನೆಗೆ ಸದ್ಯದ ಉತ್ತರ ಗ್ಲೆನ್ ಮ್ಯಾಕ್ಸ್ವೆಲ್. ಕಳಪೆ ಫಾರ್ಮ್ನಲ್ಲಿರುವ ಕಾರಣ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಕಳೆದ ಕೆಲ ಪಂದ್ಯಗಳಿಂದ ಆರ್ಸಿಬಿ ಕಣಕ್ಕಿಳಿಸಿರಲಿಲ್ಲ. ಇದೀಗ ಜಾಕ್ಸ್ ಹೊರ ನಡೆದಿರುವ ಹಿನ್ನಲೆ ಔಟ್ ಆಫ್ ಫಾರ್ಮ್ನಲ್ಲಿರುವ ಮ್ಯಾಕ್ಸ್ವೆಲ್ ಅವರನ್ನೇ ಕಣಕ್ಕಿಳಿಸಬೇಕಾದ ಅನಿವಾರ್ಯತೆ ಆರ್ಸಿಬಿ ಮುಂದಿದೆ.
ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ವಿಲ್ ಜಾಕ್ಸ್ ಬದಲಿಗೆ ಗ್ಲೆನ್ ಮ್ಯಾಕ್ಸ್ವೆಲ್ ಕಣಕ್ಕಿಳಿಯುವುದು ಖಚಿತ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ನಿರ್ಣಾಯಕ ಪಂದ್ಯದ ಮೂಲಕ ಮ್ಯಾಕ್ಸ್ವೆಲ್ ಫಾರ್ಮ್ಗೆ ಮರಳಲಿದ್ದಾರಾ ಎಂಬುದೇ ಈ ದೊಡ್ಡ ಪ್ರಶ್ನೆ.
ಏಕೆಂದರೆ ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಟಿ20 ವಿಶ್ವಕಪ್ ಕೂಡ ಶುರುವಾಗಲಿದೆ. ಅದಕ್ಕೂ ಮುನ್ನ ಮ್ಯಾಕ್ಸಿ ಫಾರ್ಮ್ಗೆ ಮರಳುವುದನ್ನು ಆಸ್ಟ್ರೇಲಿಯಾ ತಂಡ ಎದುರು ನೋಡುತ್ತಿದೆ. ಹೀಗಾಗಿ ಆರ್ಸಿಬಿ ತಂಡದ ಕೊನೆಯ ಲೀಗ್ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಫಾರ್ಮ್ ಕಂಡುಕೊಳ್ಳಬೇಕಿದೆ. ಅದರಂತೆ ಸಿಎಸ್ಕೆ ವಿರುದ್ಧ ಮ್ಯಾಕ್ಸ್ವೆಲ್ ಅಬ್ಬರಿಸುತ್ತಾರಾ ಕಾದು ನೋಡಬೇಕಿದೆ.
ವಿಲ್ ಜಾಕ್ಸ್ ಅಂಕಿ ಅಂಶಗಳು: ಐಪಿಎಲ್ ಸೀಸನ್ 17 ರಲ್ಲಿ ಆರ್ಸಿಬಿ ಪರ 8 ಪಂದ್ಯಗಳನ್ನಾಡಿರುವ ವಿಲ್ ಜಾಕ್ಸ್ ಒಂದು ಭರ್ಜರಿ ಶತಕ ಹಾಗೂ ಅರ್ಧಶತಕದೊಂದಿಗೆ ಒಟ್ಟು 230 ರನ್ ಕಲೆಹಾಕಿದ್ದಾರೆ. ಹಾಗೆಯೇ ಬೌಲಿಂಗ್ನಲ್ಲಿ 2 ವಿಕೆಟ್ ಕಬಳಿಸಿದ್ದರು. ಈ ಮೂಲಕ ಆರ್ಸಿಬಿ ತಂಡದ ಸತತ 5 ಗೆಲುವುಗಳಿಗೆ ಉತ್ತಮ ಕಾಣಿಕೆ ನೀಡಿದ್ದಾರೆ. ಇದೀಗ ನಿರ್ಣಾಯಕ ಪಂದ್ಯಕ್ಕೂ ಮುನ್ನ ಅವರು ತಂಡವನ್ನು ತೊರೆದಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಹಿನ್ನಡೆಯನ್ನುಂಟು ಮಾಡುವ ಸಾಧ್ಯತೆಯಿದೆ.