ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1 ಬಳಿ ಶೌಚಾಲಯದಲ್ಲಿ ನಿನ್ನೆ ರಾತ್ರಿ ಬರ್ಬರ ಹತ್ಯೆ ನಡೆದಿದೆ. ಶೌಚಾಲಯದ ಬಳಿ ಸೇಫ್ಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ರಾಮಕೃಷ್ಣ (48) ಎಂಬವರನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ.
ಮೃತ ರಾಮಕೃಷ್ಣನನ್ನು ಆತನದೇ ಗ್ರಾಮದ ರಮೇಶ್ ಎಂಬಾತ ಕೊಲೆ ಮಾಡಿದ್ದಾನೆ. ಇಬ್ಬರೂ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನವರು. ಹತ್ಯೆಗೆ ಕಾರಣವೆನಿಸಿರುವುದು ಅನೈತಿಕ ಸಂಬಂಧ. ಆರೋಪಿ ರಮೇಶ್, ತನ್ನ ಪತ್ನಿ ಮತ್ತು ರಾಮಕೃಷ್ಣನ ನಡುವಿನ ಅನೈತಿಕ ಸಂಬಂಧದಿಂದ ಬೇಸರಗೊಂಡು ಈ ಕ್ರೂರ ಕೃತ್ಯಕ್ಕೆ ಮುಂದಾದ ಎನ್ನಲಾಗಿದೆ.
ಸ್ಥಳಕ್ಕೆ ವಿಮಾನ ನಿಲ್ದಾಣದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹತ್ಯೆ ಮಾಡಿದ ಆರೋಪಿ ರಮೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.