ಬೆಂಗಳೂರು: ಥೈಲ್ಯಾಂಡ್ ನಿಂದ ಇನ್ಸ್ಟಾಗ್ರಾಂ ಮೂಲಕ ಹೈಡ್ರೋ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಬಟ್ಟೆ ವ್ಯಾಪಾರಿ ತೌನೇಶ್ ನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಅಂಧ್ರಹಳ್ಳಿಯ ಕಾಲೇಜು ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿ, ಎರಡು ಕೆಜಿ 779 ಗ್ರಾಂ ಹೈಡ್ರೋ ಗಾಂಜಾ, ಮೌಲ್ಯ ಸುಮಾರು ₹1.22 ಕೋಟಿ, ವಶಪಡಿಸಿಕೊಂಡಿದ್ದಾರೆ.
ಈ ಗಾಂಜಾ ಕೇರಳ ಮೂಲದ ಸೈಜು ಎಂಬಾತನಿಂದ ಥೈಲ್ಯಾಂಡ್ ನಿಂದ ಬರ್ತಿತ್ತು. 2020 ರಲ್ಲಿ ತೌನೇಶ್ ಸೈಜುಗೆ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದು, ಸೈಜು ಏರ್ಪೋರ್ಟ್ ನಲ್ಲಿ ಯಾಮಾರಿಸಿ ಗಾಂಜಾ ತರುವ ವ್ಯವಸ್ಥೆ ಮಾಡಿದ್ದ. ಗಾಂಜಾ ಸಿಂಥೆಟಿಕ್ ಪೇಪರ್ ನಲ್ಲಿ ಸುತ್ತಿ, ಬಿಸ್ಕೆಟ್ ಮತ್ತು ಚಾಕಲೇಟ್ ಬಾಕ್ಸ್ ಗಳಲ್ಲಿ ಸಿಕ್ಕುತಿದ್ದ ಕಾರಣ, ಸ್ಕ್ಯಾನ್ ಮಾಡಿಸಿದರೂ ಪತ್ತೆಯಾಗುತ್ತಿರಲಿಲ್ಲ.
ತೌನೇಶ್, ಬಟ್ಟೆ ವ್ಯಾಪಾರಿಯಾದರೂ, 2020 ರಿಂದ ಗಾಂಜಾ ಮಾರಾಟದಲ್ಲಿ ತೊಡಗಿಕೊಂಡಿದ್ದ. ಈತನ ಮೇಲೆ ಬೆಂಗಳೂರಿನ ನಾಲ್ಕು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಇನ್ಫಾರ್ಮರ್ ಒಬ್ಬರ ಮಾಹಿತಿ ಮೇರೆಗೆ ಈ ಬಾರಿ ಬಂಧನಕ್ಕೆ ಬಿದ್ದಿದ್ದಾನೆ.