ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಸಿಡಿಲು ಬಡಿದ ಪರಿಣಾಮ, ನಾಲ್ಕು ಕುರಿಗಳು ಸತ್ತುಹೋಗಿದ್ದು, ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ನಿಪ್ಪಾಣಿ ಮೂಲದ ಕುರಿಗಾಹಿಗಳಿಗೆ ಸೇರಿದ ಈ ಕುರಿಗಳು ಮೇಯಿಸುತ್ತಾ ಸಂಚಾರದಲ್ಲಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ನಿನ್ನೆ ರಾತ್ರಿ ಗ್ರಾಮದ ಹೊರವಲಯದಲ್ಲಿ ತಂಗಿದ್ದ ಕುರಿಗಾಹಿಗಳು, ಭಾರಿ ಮಳೆಯ ನಡುವೆ ಸಿಡಿಲು ಬಡಿದ ಪರಿಣಾಮ ತಮ್ಮ ಕುರಿಗಳನ್ನು ಕಳೆದುಕೊಂಡಿದ್ದಾರೆ. ಈ ದುರ್ಘಟನೆ ಕುರಿಗಾಹಿಗಳಿಗೆ ಆರ್ಥಿಕ ಸಂಕಷ್ಟ ತಂದಿದ್ದು, ಗ್ರಾಮಸ್ಥರು ಪಶು ಸಂಗೋಪನಾ ಇಲಾಖೆ ಇವರಿಗೆ ತಕ್ಷಣ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.