ಹುಟ್ಟಿದ ಮನುಷ್ಯ ಹಗಲು-ರಾತ್ರಿ ನಿರಂತರವಾಗಿ ಕೆಲಸದಲ್ಲಿ ತೊಡಗಿರುತ್ತಾನೆ. ಕೆಲಸವಿಲ್ಲದ ಜೀವನವೆಂಬುದಿಲ್ಲ. ಕೆಲಸ ಮಾಡದೆ ಇರುವುದು ನಿರ್ಜೀವತೆಯ ಲಕ್ಷಣ. ಹುಟ್ಟಿದ ಮೇಲೆ ಕೆಲಸ ಮಾಡದೆ ಇರುವ ಸ್ವಾತಂತ್ರ್ಯ ಮನುಷ್ಯನಿಗಿಲ್ಲ. ಆದರೆ ಏನು ಕೆಲಸ ಮಾಡಬೇಕು, ಹೇಗೆ ಮಾಡಬೇಕು, ಯಾವ ಭಾವನೆಯಿಂದ ಮಾಡಬೇಕು? ಎಂಬ ಆಯ್ಕೆ ಮನುಷ್ಯನಿಗಿದೆ. ಮನುಷ್ಯ ಏನೇ ಕೆಲಸ ಮಾಡಿದರೂ ಅದಕ್ಕೊಂದು ಫಲಿತಾಂಶ ಇದೆ. ಪರಿಣಾಮವಿಲ್ಲದ ಕೆಲಸವೆಂಬುದೇ ಇಲ್ಲ. ‘ಪ್ರತಿಕ್ರಿಯೆಯು ಕ್ರಿಯೆಯಿಂದ ಮಾತ್ರ’ ಎಂಬ ಮಾತು ಅಕ್ಷರಶಃ ನಿಜ. ಆದರೆ ಒಂದು ವೇಳೆ ನಮ್ಮ ನಿರೀಕ್ಷೆಗೆ ತಕ್ಕಂತೆ ಫಲ ಬಂದಿಲ್ಲದಿದ್ದರೆ ಆ ಕರ್ಮದ ಅನಿವಾರ್ಯತೆಯಾದರೂ ಏನು? ಹಾಗಾದರೆ ಕ್ರಿಯೆಗಿಂತ ನಿಷ್ಕ್ರಿಯತೆಯೆ ಒಳ್ಳೆಯದಲ್ಲವೆ? ಎಂಬುದು ಹಲವರ ವಾದ.
ಉದ್ಯೋಗಂ ಪುರುಷಲಕ್ಷಣಂ ಆಂಗ್ಲಭಾಷೆಯಲ್ಲಿ ಒಂದು ಹೇಳಿಕೆ ಇದೆ : “ಮಿಣುಕುಹುಳು ಬೆಳಗುವುದು ಅದು ಹಾರುತ್ತಿರುವಾಗಲೇ.” “ಯಃ ಕ್ರಿಯಾವಾನ್ ಸಃ ಪಂಡಿತಃ” “ಯಾರು ಕ್ರಿಯಾಶೀಲನೋ ಅವನೇ ಜ್ಞಾನಿ” ಎಂಬ ಸಂಸ್ಕೃತ ಹೇಳಿಕೆಯೂ ಉಂಟು. “ಉದ್ಯೋಗಿನಂ ಪುರುಷಸಿಂಹಮುಪೈತಿ ಲಕ್ಷ್ಮೀಃ” “ಉದ್ಯೋಗಶೀಲನನ್ನೂ, ಪುರುಷಸಿಂಹನನ್ನೂ ಐಶ್ವರ್ಯ ಸಮೀಪಿಸುತ್ತದೆ” ಎಂಬ ಸಂಸ್ಕೃತ ಹೇಳಿಕೆಯನ್ನು ಸ್ವಾಮಿ ವಿವೇಕಾನಂದರು ಉದ್ಧರಿಸುತ್ತಿದ್ದರು. “ಮಾನವನೆಂದರೆ ಕರ್ಮಜೀವಿ, ಅದಿಲ್ಲದಿದ್ದರೆ ಅವನು ನಿರ್ಜೀವಿ” ಎಂದು ಜೋಸೆಫ್ ಕೊವಾರ್ಡ್ ಹೇಳುತ್ತಾರೆ. ನಿನ್ನ ಪಾಲಿಗೆ ಬಂದ ಕರ್ಮವನ್ನು ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ಮಾಡು, ಅದರಲ್ಲೇ ಶ್ರೇಯಸ್ಸಿದೆ ಎಂಬುದೇ ಭಗವದ್ಗೀತೆಯಲ್ಲಿ ಕೃಷ್ಣನ ಉಪದೇಶವೂ ಆಗಿದೆ. ಅರ್ಜುನನಿಗೆ ಕೃಷ್ಣ ಹೇಳುತ್ತಾನೆ.
ನಿಯತಂ ಕುರು ಕರ್ಮ ತ್ವಂ ಕರ್ಮ ಜ್ಯಾಯೋ ಹ್ಯಕರ್ಮಣಃ ಶರೀರಯಾತ್ರಾಂಪಿ ಚ ತೇನ ಪ್ರಸಿಧ್ಯೇದಕರ್ಮಣಃ || ಅಂದರೆ ನೀನು ನಿತ್ಯ ಕರ್ಮವನ್ನು ಮಾಡು. ಏಕೆಂದರೆ ಕರ್ಮ ಮಾಡದೆ ಇರುವುದಕ್ಕಿಂತ ಕರ್ಮ ಮಾಡುವುದು ಉತ್ತಮ. ಕರ್ಮ ಮಾಡದೆ ಇರುವುದರಿಂದ ನಿನಗೆ ಜೀವನಯಾತ್ರೆ ಕೂಡ ಸಾಧ್ಯವಾಗಲಾರದು. ಕರ್ಮದ ಮಹತ್ತ್ವವನ್ನು ಕುರಿತು ಹೆನ್ರಿ ಫೋರ್ಡ್ ಒಂದು ಸುಂದರ ಮಾತು ಹೇಳುತ್ತಾನೆ: “ಕೆಲಸವು ನಮಗೆ ಜೀವನವನ್ನು ನೀಡುತ್ತದೆ ಮತ್ತು ಅದು ನಮ್ಮ ಜೀವನವೂ ಆಗಿದೆ!” ಕರ್ಮವು ನಮಗೆ ಬದುಕನ್ನು ಕೊಡುತ್ತದೆ ಹಾಗೂ ಬದುಕಲು ಬೇಕಾದದ್ದನ್ನೆಲ್ಲ ಒದಗಿಸುತ್ತದೆ.
ಹೀಗೆ ಮನುಷ್ಯನ ಜೀವನದಲ್ಲಿ ಕರ್ಮ ಅನಿವಾರ್ಯ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಇನ್ನೊಂದು ಮಾತನ್ನು ಹೇಳುತ್ತಾನೆ. ನಿನ್ನ ಪಾಲಿಗೆ ಬಂದ ಕರ್ಮವನ್ನು ಮಾಡು, ಆದರೆ ಫಲವನ್ನು ಅಪೇಕ್ಷಿಸಬೇಡ ಎಂಬುದಾಗಿ. ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ’ ಎಂಬ ಕೃಷ್ಣನ ಮಾತು ಅರ್ಜುನನನ್ನು ಮಾತ್ರವಲ್ಲ ಜನಸಾಮಾನ್ಯರನ್ನೂ ಸ್ವಲ್ಪ ಗೊಂದಲದಲ್ಲಿ ಸಿಲುಕಿಸಿದೆ. ವ್ಯಾಪಾರ ಎಂಬ ಕರ್ಮವನ್ನು ಮಾಡುವಾಗ ಲಾಭವನ್ನು ಅಪೇಕ್ಷಿಸದೆ ಮಾಡಲಾದೀತೆ? ಕೃಷ್ಣ ಹೇಳುತ್ತಾನೆ: ವ್ಯಾಪಾರ ಕರ್ಮ ಮಾಡುವಾಗ ಕೇವಲ ಲಾಭವನ್ನೇ ಅಪೇಕ್ಷಿಸಬೇಡ. ವ್ಯಾಪಾರ ಎಂದ ಮೇಲೆ ಲಾಭ, ನಷ್ಟ ಎರಡೂ ಇರುತ್ತವೆ.
ಪ್ರತಿಸಲ ಲಾಭವನ್ನೇ ನಿರೀಕ್ಷಿಸಿದರೆ, ಇಂತಿಷ್ಟೇ ಲಾಭ ಬರಬೇಕೆಂದು ಅಪೇಕ್ಷಿಸಿದರೆ ನೀನು ದುಃಖಿತನಾಗುತ್ತೀ. ನಾವು ಜೀವನದಲ್ಲಿ ದುಃಖ ಅನುಭವಿಸುವುದು ನಮ್ಮ ಕರ್ಮದಿಂದಲ್ಲ; ಬದಲಿಗೆ ಕರ್ಮಫಲದಲ್ಲಿ ಆಸಕ್ತರಾಗಿರುವುದರಿಂದ. ನಾವು ಮಾಡಿದ ಕರ್ಮಕ್ಕೆ ಫಲ ಬಂದೇ ಬರುವುದು. ಆದರೆ ನಮ್ಮ ಅಪೇಕ್ಷೆಯಂತೆ ಬರಬೇಕೆಂಬ ಆಗ್ರಹವೇ ಎಲ್ಲ ದುಃಖದ ಮೂಲ. ಫಲದ ಬಗ್ಗೆ ನಿರ್ಲಿಪ್ತನಾದರೆ ಮನುಷ್ಯನ ಜೀವನವೇ ಆನಂದಮಯವಾಗುತ್ತದೆ. ಇದು ಭಗವದ್ಗೀತೆಯ ಸಾರ ಸಂದೇಶ. ಫಲದ ಬಗ್ಗೆ ಗೊಣಗದೆ ಕೆಲಸ ಮಾಡು ಎಂಬುದು ಡಿವಿಜಿಯವರ ಅಭಿಮತ.
ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು |
ದೊರೆತುದ ಹಸಾದವೆಂದುಣ್ಣು ಗೊಣಗಿಡದೆ||
ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ|
ಹೊರಡು ಕರೆ ಬರಲ್ ಅಳದೆ ಮಂಕುತಿಮ್ಮ ||
“ನಿನಗೆ ದೇವರು ಕೊಟ್ಟಿರುವ ಕೆಲಸವನ್ನು ಇದು ಮೇಲು ಅಥವಾ ಕೀಳು ಎನ್ನುವ ಭಾವನೆ ಬಿಟ್ಟು ಅದು ಎಷ್ಟೇ ಚಿಕ್ಕದಾಗಿದ್ದರೂ ಮನಸ್ಸಿಟ್ಟು ಆ ಕೆಲಸವನ್ನು ಮಾಡು. ಆ ಕೆಲಸ ಮಾಡಿದಾಗ ಸಿಕ್ಕಿದ ಪ್ರತಿಫಲವನ್ನು ಗೊಣಗದೆ, ದೇವರು ಕೊಟ್ಟ ಪ್ರಸಾದವೆಂದು ಸ್ವೀಕರಿಸು. ಪರಮಾರ್ಥವನ್ನು ಬಿಡದೆ ಜೀವನದ ಭಾರವನ್ನು ಹೊರು. ಇಷ್ಟೆಲ್ಲವನ್ನು ನೀನು ತೃಪ್ತಿಕರವಾಗಿ ಮಾಡಿದ ಮೇಲೆ ನೀನು ಮಾಡುವುದಿನ್ನೇನೂ ಉಳಿದಿರುವುದಿಲ್ಲ. ಆ ಪರಮಾತ್ಮನ ಕರೆ ಬಂದಾಗ ಅಳದೆ ಹೊರಡುತ್ತಿರು” ಎಂಬುದು ಇದರರ್ಥ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಫಲವನ್ನು ಅಪೇಕ್ಷಿಸಬೇಡ ಎಂದಿದ್ದಾನೆಯೇ ವಿನಾ ಫಲ ಸಿಗುವುದಿಲ್ಲ ಎನ್ನಲಿಲ್ಲ. ಎಲ್ಲ ಕರ್ಮಕ್ಕೂ ಅದರದ್ದೇ ಫಲ ಇದ್ದೇ ಇರುತ್ತದೆ. ‘ಮಾಡಿದ್ದುಣ್ಣೋ ಮಹರಾಯ’ ಎಂಬುದೇ ಕರ್ಮದ ನಿಯಮ.
ಕರ್ಮಫಲ : ಕರ್ಮಫಲ ಯಾರನ್ನೂ ಬಿಡುವುದಿಲ್ಲ. ಈ ಸಿದ್ಧಾಂತದಲ್ಲಿ ಭಗವಂತ ಕೂಡ ಕೈಯಾಡಿಸುವುದಿಲ್ಲ. ನಮ್ಮ ಕರ್ಮಫಲವನ್ನು ಸ್ವತಃ ಅನುಭವಿಸಬೇಕೇ ವಿನಾ ಅದರಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಅಥವಾ ಅದನ್ನು ಇನ್ನೊಬ್ಬರಿಗೆ ವರ್ಗಾಯಿಸಲೂ ಬರುವುದಿಲ್ಲ. ಈ ಕರ್ಮಸಿದ್ಧಾಂತವನ್ನು ಪುರಸ್ಕರಿಸುವ ಸರ್ವಜ್ಞ ಹೇಳುತ್ತಾನೆ.
ಹಿಂದೆ ಮಾಡಿದ ಕರ್ಮವೆಂದಿಗೂ ಬೆಂಬಿಡದು |
ಬಂದ ಭೋಗವನು ತಿಂದು ತೀರಲೇಬೇಕು
ನೊಂದೆವೆನಬೇಡ ಸರ್ವಜ್ಞ ||
ಪುರಂದರದಾಸರಂತೂ “ಆರೇನ ಮಾಡುವರು ಆರಿಂದಲೇನಹುದು ಪೂರ್ವಜನ್ಮದ ಕರ್ಮ ವಿಧಿ ಬೆನ್ನ ಬಿಡದು” ಎಂದು ಹಾಡುತ್ತ ಜನ್ಮಜನ್ಮಾಂತರದ ಲೆಕ್ಕವಿದು ಎಂದು ಸಾರಿದ್ದಾರೆ. ಸುಭಾಷಿತವೊಂದು ಹೇಳುತ್ತದೆ.
“ಕರ್ಮಣಾ ಜಾಯತೇ ಸರ್ವಂ ಕರ್ಮೈವ ಗತಿಸಾಧನಂ |
ತಸ್ಮಾತ್ಸರ್ವಪ್ರಯತ್ನೇನ ಸಾಧು ಕರ್ಮ ಸಮಾಚರೇತ್ ||
ಅಂದರೆ ಕರ್ಮದಿಂದಲೇ ಎಲ್ಲವೂ ಆಗುತ್ತದೆ. ಕರ್ಮವೇ ನಮ್ಮ ಬೇರೆಬೇರೆ ಗತಿಗಳಿಗೆ ಕಾರಣ. ಆದುದರಿಂದ ಎಲ್ಲ ರೀತಿಯ ಪ್ರಯತ್ನಗಳಿಂದ ಒಳ್ಳೆಯ ಕೆಲಸವನ್ನು ಮಾಡಬೇಕು. ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲ ನಿಶ್ಚಿತ. ಈ ಬಗ್ಗೆ ಇನ್ನೊಂದು ಸುಭಾಷಿತ ಹೇಳುತ್ತದೆ.
ಶುಭೇನ ಕರ್ಮಣಾ ಸೌಖ್ಯಂ ದುಃಖಂ ಪಾಪೇನ ಕರ್ಮಣಾ |
ಕೃತಂ ಭವತಿ ಸರ್ವತ್ರ ನಾಕೃತಂ ವಿದ್ಯತೇ ಕ್ವಚಿತ್ ||
ಒಳ್ಳೆಯ ಕರ್ಮದಿಂದ ಸುಖವೂ ಕೆಟ್ಟ ಕರ್ಮದಿಂದ ದುಃಖವೂ ಉಂಟಾಗುತ್ತದೆ. ಮಾಡಿದ ಕರ್ಮಗಳೇ ಎಲ್ಲ ಕಡೆಗಳಲ್ಲಿಯೂ ಫಲಗಳನ್ನು ಕೊಡುತ್ತವೆ. ಕರ್ಮಗಳನ್ನು ಮಾಡದೆ ಫಲವೆಂಬುದು ಎಲ್ಲಿಯೂ ಇಲ್ಲ. ಜಿ.ಪಿ. ರಾಜರತ್ನಂ ಒಂದೆಡೆ ಹೇಳುತ್ತಾರೆ: “ಕರ್ಮವೆಂಬುದು ನಮಗೆ ನೆರವಾಗುವ ನಾಣ್ಯ. ಪಾಪಭೀತಿ ಮತ್ತು ಪುಣ್ಯಪ್ರೀತಿ ಇವು ಅದರ ಎರಡು ಮುಖ. ಇದರಲ್ಲಿ ಯಾವ ಮುಖ ಸವಕಲಾದರೂ ನಾಣ್ಯ ಚಲಾವಣೆಯಾಗದು. ದೇವರ ವಿಷಯದಲ್ಲಾದರೂ ಅಪರಾಧ ಮಾಡಿ ಬದುಕಿಕೊಳ್ಳಬಹುದು. ಕರ್ಮದ ವಿಷಯದ ಮಟ್ಟಿಗೆ ಎಷ್ಟು ಎಚ್ಚರದಿಂದ ಇದ್ದರೂ ಸಾಲದು.” ನಾವಿಂದು ಅನುಭವಿಸುತ್ತಿರುವ ಎಲ್ಲ ಸುಖ-ದುಃಖಗಳಿಗೂ ಹಿಂದಿನ ಕರ್ಮವೇ ಕಾರಣ.