ಕಾಲಾತೀತವಾದ ಸತ್ಯವನ್ನು ಜನಪ್ರಿಯವಾದ ರಾಮಾಯಣ, ಮಹಾಭಾರತದಂಥ ಪುರಾಣಗಳ ಘಟನೆಗಳಲ್ಲಿ ಕಂಡುಕೊಂಡು ಅದನ್ನು ಪುಟ್ಟ ಗಾದೆಗಳ ಮೂಲಕ ಸಾರ್ವಜನಿಕರಿಗೆ ಮುಟ್ಟಿಸುವ ಹಿಂದಿನವರ ಸೇವೆ ಅದ್ಭುತವಾದದ್ದು. ರಾಮಾಯಣದ ಒಂದು ಸನ್ನಿವೇಶವನ್ನು ಎತ್ತಿಕೊಂಡು ಸದ್ಭಾವನೆಯಿಂದ ಮಾಡುವ ಯಾರ ಭಕ್ತಿಯೂ ಕಿರಿದಾದದ್ದಲ್ಲ, ಯಾವ ಸೇವೆಯೂ ಕಿರಿದಾದದ್ದಲ್ಲ ಎಂದು ಈ ಗಾದೆ ಸಾರಿ ಹೇಳುತ್ತದೆ. ರಾವಣನೆಂಬ ದುಷ್ಟನ ಸಂಹಾರಕ್ಕಾಗಿ ಲಂಕೆಗೆ ಹೋಗಲು ಶ್ರೀರಾಮನು ಸಮುದ್ರಕ್ಕೆ ಸೇತುವೆಯನ್ನು ನಿರ್ಮಿಸಬೇಕೆಂದು ಸಂಕಲ್ಪಿಸಿಕೊಂಡಾಗ, ರಾಮನ ಪರಮಭಕ್ತನಾದ ಆಂಜನೇಯ ತನ್ನ ಕಪಿಸೇನೆಯನ್ನು ಬಳಸಿ ಸಮುದ್ರದ ದಂಡೆಯ ಮೇಲಿರುವ ಕಲ್ಲು ಬಂಡೆಗಳನ್ನು ಹೊತ್ತು ತಂದು ಒಂದು ಸೇತುವೆಯನ್ನು ನಿರ್ಮಿಸುತ್ತಾನೆ.
ಅದನ್ನು ಕಂಡ ಅಳಿಲೊಂದು ಬಂಡೆಯಷ್ಟು ಭಾರ ತನ್ನಿಂದ ಹೊತ್ತು ತರಲಾಗುವುದಿಲ್ಲ ಎಂಬ ಕಾರಣದಿಂದಾಗಿ ಸುಮ್ಮನೆ ಕುಳಿತು ನೋಡುತ್ತಾ ಕಾಲಹರಣ ಮಾಡುವುದಿಲ್ಲ. ತನ್ನಿಂದ ಹೊತ್ತು ತರಲು ಸಾಧ್ಯವಾಗಬಹುದಾದ ಮರಳನ್ನು ಸೇತುವೆಯ ನಿರ್ಮಾಣಕ್ಕೆ ಪೂರಕವಾಗಿ ಅದು ಜಮಾಯಿಸುತ್ತದೆ. ಹಾಗೆ ಜಮಾಯಿಸುವ ಆ ಅಳಿಲಿನ ರೀತಿ ಕೂಡಾ ವಿಚಿತ್ರ. ಮೈಯನ್ನು ನೀರಲ್ಲಿ ಒದ್ದೆಮಾಡಿಕೊಂಡು, ದಡದ ಮರಳಲ್ಲಿ ಹೊರಳಾಡಿ, ಸೇತುವೆ ಕಟ್ಟುವ ಸ್ಥಳಕ್ಕೆ ಹೋಗಿ ಅಳಿಲು ತನ್ನ ಮೈಯನ್ನು ಒದರಿ ಮೈಗೆ ಅಂಟಿಕೊಂಡ ಮರಳನ್ನು ಬೀಳಿಸುತ್ತದೆ. ಅದನ್ನು ನೋಡಿದ ರಾಮನಿಗೆ ಸಶಕ್ತನಾದ ಆಂಜನೇಯ ಮತ್ತು ಆತನ ಬಂಟರ ಭಕ್ತಿ ಮತ್ತು ಸೇವೆಗಿಂತ ಅಶಕ್ತವಾದ ಆ ಪುಟ್ಟ ಅಳಿಲಿನ ಭಕ್ತಿ ಮತ್ತು ಸೇವೆ ಹಿರಿದಾಗಿ ಕಾಣುತ್ತದೆ.
ರಾಮನು ಪ್ರೀತಿಯಿಂದ ಅಳಿಲಿನ ಮೈಸವರಿ ತನ್ನ ಕೃತಜ್ಞತೆಯನ್ನು ಸಲ್ಲಿಸಿದನಂತೆ. ಅಂದಿನಿಂದ ರಾಮನ ಬೆರಳಿನ ಗುರುತು ಅಳಿಲುಗಳ ಬೆನ್ನಮೇಲೆ ಶಾಶ್ವತವಾಗಿ ಉಳಿದವಂತೆ. ಮಹತ್ತರವಾದ ಕಾರ್ಯ ಸಾಧಿಸುವಾಗ ಚಿಕ್ಕವರ ಸೇವೆಯೂ ಮುಖ್ಯ ಎಂಬುದನ್ನು ಈ ಗಾದೆ ಎತ್ತಿ ತೋರಿಸುತ್ತದೆ. ಅಣ್ಣಯ್ಯನ ಅಳಿಲು ಸೇವೆ ಎಂಜಲು ಕೈನಲ್ಲಿಕಾಗೆಯನ್ನೂ ಓಡಿಸದ ಜನ ಇರುವ ಈ ಕಾಲದಲ್ಲಿಕಡಿಮೆ ದುಡಿಮೆಯಲ್ಲೇ ದಿನನಿತ್ಯ ಹಣ ಕೊಟ್ಟು ಅಳಿಲಿಗೆ ಅನ್ನ ಹಾಕಿ ಅಳಿಲು ಸೇವೆ' ಮಾಡುತ್ತಿರುವ ಅಪರೂಪದ ದಿನಗೂಲಿ ನೌಕರ ಅಣ್ಣಯ್ಯ ಈಗ
ಅನ್ನಯ್ಯ’ ಆಗಿದ್ದಾರೆ.
ಈತ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿಗುತ್ತಿಗೆ ನೌಕರ. ಮನೆಯಲ್ಲಿಗಂಜಿ ಕುಡಿದರೂ ಜಿಲ್ಲಾಆಟದ ಮೈದಾನದಲ್ಲಿರುವ ಅಳಿಲುಗಳಿಗೆ ಮಾತ್ರ ನಗರದ ಹೊಟೇಲ್ನಲ್ಲಿ ಪಲಾವ್, ಚಿತ್ರನ್ನ, ಪುಳಿಯೋಗರೆ, ಇಡ್ಲಿ ಮತ್ತಿತರೆ ಆಹಾರವನ್ನು ಎರಡೂವರೆ ಪ್ಲೇಟ್ ಖರೀದಿಸಿ ತರುತ್ತಾರೆ. ಈತ ಕರ್ತವ್ಯಕ್ಕೆ ಹಾಜರಾಗುವ ಮುಂಚೆಯೇ ೬ ಗಂಟೆಗೊಮ್ಮೆ, ೧೦ಕ್ಕೆ, ಮಧ್ಯಾಹ್ನ ೧ಕ್ಕೆ, ಸಂಜೆ ೫ಗಂಟೆಗೆ ಒಟ್ಟು ೪ ಬಾರಿ ಅಳಿಲುಗಳಿಗೆ ಊಟ ಹಾಕುತ್ತಾರೆ. ಜತೆಗೆ ಕುಡಿಯಲು ನೀರು ನೀಡುತ್ತಾರೆ.
ಮೈದಾನದಲ್ಲಿರುವ ಹುಣಸೇ ಮರದ ಮೇಲೆ ಅಣ್ಣಯ್ಯನ ಬರುವಿಕೆಗೆ ಕಾಯುತ್ತಾ ಕುಳಿತುಕೊಳ್ಳುವ ಸುಮಾರು ೧೦ಕ್ಕೂ ಹೆಚ್ಚು ಅಳಿಲುಗಳು ಆಹಾರ ಬಂತೆಂದರೆ ಚಿಂವ್, ಚಿಂವ್ ಶಬ್ದದೊಂದಿಗೆ ಬಾಲ ಕುಣಿಸುತ್ತಾ ಮರದ ಬೊಡ್ಡೆಗೆ ಇಳಿಯುತ್ತವೆ. ಮರದ ಸುತ್ತ ಇಟ್ಟಿರುವ ೪ ತಟ್ಟೆಗಳಿಗೆ ಆಹಾರ, ಕುಡಿಕೆಗೆ ನೀರು ಹಾಕಿದಾಗ ಅಣ್ಣಯ್ಯನಿಗೆ ಅಂಜದ ಅಳಿಲುಗಳು ತಿಂಡಿ ಮುಕ್ಕಿ ನೀರು ಕುಡಿದು ಸ್ವಚ್ಛಂದವಾಗಿ ಮರದ ಮೇಲೆ ಆಟ ಆಡುತ್ತವೆ. ಅಣ್ಣಯ್ಯ ಸಂಜೆ ಹೋಗುವಾಗ ಅಳಿಲುಗಳು ತಿಂದುಂಡ ತಟ್ಟೆ ಮತ್ತು ಕುಡಿಕೆಯನ್ನು ಸ್ವಚ್ಛ ಮಾಡಿ ಹೋಗುತ್ತಾರೆ. ಈತ ರಜೆಯಲ್ಲಿದ್ದಾಗಲೂ ಕೂಡ ತಪ್ಪದೇ ಆಹಾರ ಹಾಕುತ್ತಾರೆ.
ಒಂದು ವೇಳೆ ಪರ ಊರಿಗೆ ಹೋದಾಗ ತನ್ನ ಸಹೋದ್ಯೋಗಿ ಪ್ರಕಾಶ ಎಂಬುವರಿಗೆ ಹಣ ನೀಡಿ ಆಹಾರ ಹಾಕಲು ನಿಯೋಜಿಸುತ್ತಾರೆ. ಪ್ರಾಣಿ, ಪಕ್ಷಿ ಸಂರಕ್ಷಣೆ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ತೋರಿಕೆಯ ಪ್ರಾಣಿ ಪ್ರಿಯರಿಗಿಂತ ಎಲೆಮರೆ ಕಾಯಿಯಂತೆ ಅಳಿಲುಗಳಿಗೆ ತಾಯಿ ಮಮತೆ ತೋರಿಸುತ್ತಿರುವ ಅಣ್ಣಯ್ಯನಿಗೆ ಪರಿಸರ ಪ್ರಿಯರು ಒಂದು ಹ್ಯಾಟ್ಸ್ ಅಪ್ ಹೇಳಲೇಬೇಕು. ಇದಿಷ್ಟು ಘಟನೆ ಯಾಕೆ ಹೇಳಿದೆ ಅಂದ್ರೆ.., ಮೊನ್ನೆ ನಡೆದ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಳಿಲೊಂದು ದೊಡ್ಡ ಪಾತ್ರ ವಹಿಸಿದೆ. ಟ್ರಂಪಣ್ಣನಿಗೆ ಈ ಅಳಿಲು ಅಲ್ಲಲ್ಲಾ ಅದರ ಆತ್ಮ ಲಕ್ಷಾಂತರ ವೋಟು ಗಳಿಸಿಕೊಟ್ಟಿದೆ.
೨೦೧೭ ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಮಾರ್ಕ್ ಲೋಂಗೋ ಎಂಬಾತನಿಗೆ ರಸ್ತೆಯ ಮೇಲೊಂದು ಪುಟ್ಟ ಅಳಿಲಿನ ಮರಿ ಸಿಕ್ಕಿತು. ಕಾರು ಅಪಘಾತದಲ್ಲಿ ಸತ್ತುಹೋದ ತನ್ನ ತಾಯಿಯ ಶವದ ಎದುರು ಅನಾಥವಾಗಿ ನಿಂತಿದ್ದ ಇದನ್ನು ಎತ್ತಿಕೊಂಡು ಆತ ಮನೆಗೆ ಹೋದ. ಹಾಲು ಗೀಲು ಕುಡಿಸಿ ಅದನ್ನು ರೆಸ್ಕ್ಯೂ ಸೆಂಟರಿಗೆ ಕೊಡುವ ಪ್ರಯತ್ನ ಮಾಡಿದ. ಆದರೆ ಅದನ್ನು ಯಾರೂ ತೆಗೆದುಕೊಳ್ಳಲಿಲ್ಲ. “ಸರಿ” ಅಂತ ತನ್ನ ಮನೆ ಹಿತ್ತಲಲ್ಲಿ ಬಿಟ್ಟರೆ, ಮಾರನೇ ದಿನ ಬೆಳಿಗ್ಗೆ, ಮತ್ತೆ ಆತನ ಮನೆ ಬಾಗಿಲಲ್ಲೇ ಪತ್ತೆಯಾಯಿತು, ತುಂಡಾದ ಅರ್ಧ ಬಾಲದ ಜೊತೆಗೆ. ಆಗ ಇದನ್ನು ಸಾಕುವ ಜವಾಬ್ದಾರಿ ಈತನೇ ತೆಗೆದುಕೊಂಡ. ಇದಕ್ಕೆ “ಪೀನಟ್” (ಶೇಂಗಾಬೀಜ) ಅಂತ ಹೆಸರಿಟ್ಟ. ಅದರ ಜೊತೆಗೇ ಬ್ರೇಕ್ ಫಾಸ್ಟ್, ಆಟ ಓಟ, ಅದರ ಬಾಲ್ಯದ ತುಂಟಾಟಗಳ ವೀಡಿಯೋ ತೆಗೆದು ಇನ್ಸ್ಟಾಗ್ರಾಂನಲ್ಲಿ ಹಾಕತೊಡಗಿದ. ಮುದ್ದಾಗಿದ್ದ ಅಳಿಲಿನ ವೀಡಿಯೋ ವೀಕ್ಷಿಸಿ ಐದಾರು ಲಕ್ಷ ಜನ ಸಬ್ಸ್ಕೈಬರ್ ಆದರು. ಪೀನಟ್ ಅಮೇರಿಕನ್ ಜನರ ಸೆಲೆಬ್ರಿಟಿ ಸ್ಟಾರ್ ಆಯಿತು. ಜೊತೆಗೆ ಅಪ್ಪ ಮಾರ್ಕ್ ಲೋಂಗೋನಿಗೆ ತಿಂಗಳಿಗೆ ಸಾವಿರಾರು ಡಾಲರ್ ಆದಾಯ ಹರಿದು ಬರತೊಡಗಿತು.
ಈ ಆದಾಯದಿಂದ ಇನ್ನೂ ಅನೇಕ ಪ್ರಾಣಿಗಳನ್ನು ರೆಸ್ಕ್ಯೂ ಮಾಡಿದ. ಆದರೆ ಅಮೇರಿಕನ್ (ಸ್ಟೇಟ್) ಕಾನೂನಿನ ಪ್ರಕಾರ ಅಳಿಲು ಒಂದು ಕಾಡು ಪ್ರಾಣಿ. ಅದನ್ನು ಲೈಸೆನ್ಸ್ ಇಲ್ಲದೇ ಸಾಕುವಂತಿಲ್ಲ. ಮಾರ್ಕ್ ಲೋಂಗೋ ಹೇಳುವ ಪ್ರಕಾರ ಆತ ೨೦೧೭ ರಲ್ಲೇ ಲೈಸೆನ್ಸಿಗೆ ಅರ್ಜಿ ಸಲ್ಲಿಸಿದ್ದ. ಆದರೂ ಯಾಕೆ ಡಿಲೇ ಆಯಿತು ಅನ್ನುವುದನ್ನು ಆತ ಹೇಳಿಲ್ಲ. ಲೈಸೆನ್ಸ್ ಇಲ್ಲದ ಕಾರಣ ಈ “ಪೀನಟ್” ಅನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿ ಎತ್ತಿಕೊಂಡು ಹೋದರು. ಈಗಾಗಲೇ ಇದ್ದ ಲಕ್ಷಾಂತರ ಇನ್ಸ್ಟಾಗ್ರಾಂ ಅಭಿಮಾನಿಗಳು ಇಂಟರ್ನೆಟ್ ಮೂಲಕ ಪ್ರತಿಭಟಿಸಿದರು.
ಇದಾದ ಎರಡೇ ದಿನಗಳ ನಂತರ, ಪೀನಟ್ ಅಧಿಕಾರಿಯೊಬ್ಬನನ್ನು ಕಚ್ಚಿತು ಅಂತ ಹೇಳಲಾಯಿತು. ಕಚ್ಚಿಸಿಕೊಂಡ ಅಧಿಕಾರಿಗೆ ರೇಬಿಸ್ ಬಂದರೇನು ಮಾಡುವುದು? ಅದಕ್ಕಾಗಿ ಪೀನಟ್ ದೇಹದಲ್ಲಿ ರೇಬಿಸ್ ವೈರಾಣು ಇದೆಯೇ ಅಂತ ಪರೀಕ್ಷೆ ಮಾಡಬೇಕು ಅಂತ ನಿರ್ಧಾರ ಆಯಿತು. ಆದರೆ ಅಮೇರಿಕನ್ ಕಾನೂನಿನಲ್ಲಿ ಜೀವಂತ ಪ್ರಾಣಿಯ ದೇಹದಲ್ಲಿ ರೇಬಿಸ್ ವೈರಾಣು ಇದೆಯೇ ಅಂತ ಪರೀಕ್ಷೆ ಮಾಡಲು ಅವಕಾಶವಿಲ್ಲ. ಆದುದರಿಂದ ಪೀನಟ್ ಅನ್ನು ದಯಾಮರಣಕ್ಕೆ ಗುರಿಪಡಿಸಿ ಅಂದರೆ ಕೊಂದುಹಾಕಿ ರೇಬಿಸ್ ವೈರಾಣು ಪರೀಕ್ಷೆ ಮಾಡಲಾಯಿತು.
ಪೀನಟ್ ಅನ್ನು ಕೊಂದದ್ದು ಚುನಾವಣೆ ಸಂದರ್ಭದಲ್ಲಿ ಸಿಕ್ಕಾಪಟ್ಟೆ ಆಕ್ರೋಶಕ್ಕೆ ಕಾರಣವಾಯಿತು. ಇದಕ್ಕೆಲ್ಲಾ ಬೈಡನ್ ಅಜ್ಜನ ಆಡಳಿತ ಕಾರಣ ಅಂತ ಲಕ್ಷಾಂತರ ವೋಟು ಟರ್ನ್ ಆದವು. ಟ್ರಂಪಣ್ಣನ ಆಫೀಷಿಯಲ್ ಸೋಷಿಯಲ್ ಮೀಡಿಯಾ ಎಕೌಂಟ್ ನಲ್ಲಿ ಪೀನಟ್ನ ಯೂಥನೇಷಿಯ ವಿರುದ್ಧ ಪೋಸ್ಟ್ ಮಾಡಲಾಯಿತು.