
Rashmika Mandanna unveils fierce warrior avatar in first look poster
ಸತತ ಹಿಟ್ ಸಿನಿಮಾಗಳನ್ನೇ ಕೊಟ್ಟಿರುವ ನ್ಯಾಷನಲ್ ಕ್ರಶ್ ಈಗ ತಮ್ಮ ಹೊಸ ಸಿನಿಮಾ ಘೋಷಿಸಿದ್ದಾರೆ. ಅದೂ ಕೂಡಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ.
ಕಳೆದ ಶುಕ್ರವಾರವಷ್ಟೇ ಬಹುನಿರೀಕ್ಷಿತ ‘ಕುಬೇರ’ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ತೆರೆಕಂಡು ಯಶಸ್ವಿಯಾಗಿದೆ. ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಮುಂದುವರಿದಿದ್ದು, ಕುಬೇರ ಬಿಡುಗಡೆಯಾದ ಒಂದೇ ವಾರಕ್ಕೆ ನಟಿಯ ಹೊಸ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದೆ. ‘ಮೈಸಾ’ ಈ ಚಿತ್ರದ ಶೀರ್ಷಿಕೆ.
ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯ ಈ ಚಿತ್ರಕ್ಕೆ ರವೀಂದ್ರ ಪುಲ್ಲೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕಥೆ ಕೂಡಾ ನಿರ್ದೇಶಕರದ್ದೇ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ತೆರೆಕಾಣಲಿರುವ ಈ ಚಿತ್ರವನ್ನು ಅಜಯ್ ಮತ್ತು ಅನಿಲ್ ಸಯ್ಯಾಪುರೆಡ್ಡಿ ಹೈದರಾಬಾದ್ ಮೂಲದ ಅನ್ಫಾರ್ಮುಲಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ಸಾಯಿ ಗೋಪಾ ಚಿತ್ರದ ಸಹ ನಿರ್ಮಾಪಕರು.
ಕುಬೇರ ಯಶಸ್ಸಿನಲೆಯಲ್ಲಿ ತೇಲುತ್ತಿರುವ ರಶ್ಮಿಕಾ ಮಂದಣ್ಣ ಅವರ ಹೊಸ ಚಿತ್ರದ ಕಥೆ ಏನಿರಬಹುದೆಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ. 2021ರಲ್ಲಿ ತೆಲುಗು ಸೋಷಿಯಲ್ ಡ್ರಾಮಾ ‘ಅರ್ಧ ಶತಬ್ದಂ’ ಮೂಲಕ ಚಿತ್ರರಂಗಕ್ಕೆ ತಮ್ಮ ಚೊಚ್ಚಲ ಪ್ರವೇಶ ಮಾಡಿದ ರವೀಂದ್ರ ಪುಲ್ಲೆ ನಿರ್ದೇಶನದ ಈ ಚಿತ್ರದ ಮೊದಲ ನೋಟ ಆನ್ಲೈನ್ನಲ್ಲಿ ಅಬ್ಬರಿಸುತ್ತಿದೆ.
ಬಹುತೇಕರ ಗಮನ ಸೆಳೆಯುತ್ತಿರುವ ಫಸ್ಟ್ ಲುಕ್ ಪೋಸ್ಟರ್ನಲ್ಲಿ, ರಶ್ಮಿಕಾ ಉಗ್ರ ಮತ್ತು ರಕ್ತಸಿಕ್ತ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಲೋಸ್ ಅಪ್ನಲ್ಲಿ ಅವರ ಮುಖ ರಕ್ತದಿಂದ ಕೂಡಿದ್ದು, ಕತ್ತಿಯಂತಹ ಆಯುಧವನ್ನು ಹಿಡಿದಿದ್ದಾರೆ. ಕೆದರಿದ ಕೂದಲು ಮತ್ತು ಆಕ್ರಮಣಕಾರಿ ಮುಖಭಾವದೊಂದಿಗೆ, ನಟಿ ಯುದ್ಧಕ್ಕೆ ಸಿದ್ಧರಾಗಿರುವಂತೆ ಕಾಣಿಸಿಕೊಂಡಿದ್ದಾರೆ.
ಸದಾ ನಗು, ಪ್ರೀತಿ, ಕಾಳಜಿಯಂತಹ ಭಾವನೆಗಳನ್ನೇ ವ್ಯಕ್ತಪಡಿಸುವ ನಟಿಯ ಮೊಗವೀಗ ಆಕ್ರಮಣಕಾರಿಯಂತಹ ಭಾವನೆಯನ್ನು ವ್ಯಕ್ತಪಡಿಸಿದೆ. ನ್ಯಾಷನಲ್ ಕ್ರಶ್ನ ಪವರ್ಫುಲ್ ಲುಕ್ ಇಂಟರ್ನೆಟ್ನಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ನಿರ್ಮಾಣ ಸಂಸ್ಥೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟರ್ ಶೇರ್ ಮಾಡಿ, ಅವಳು ಘರ್ಜಿಸುತ್ತಾಳೆ ಎಂಬರ್ಥದಲ್ಲಿ ಕ್ಯಾಪ್ಷನ್ ಕೊಟ್ಟಿದೆ.
ಪೋಸ್ಟರ್ ಅನಾವರಣಗೊಳಿಸುವಾಗ ರಶ್ಮಿಕಾ ತಮ್ಮ ಅಭಿಮಾನಿಗಳಿಗಾಗಿ ಭಾವನಾತ್ಮಕ ಬರಹವನ್ನೂ ಹಂಚಿಕೊಂಡಿದ್ದಾರೆ. “ನಾನು ಯಾವಾಗಲೂ ನಿಮಗೆ ಹೊಸದನ್ನು, ವಿಭಿನ್ನವಾದದ್ದನ್ನು, ರೋಮಾಂಚಕಾರಿಯಾದದ್ದನ್ನು ನೀಡಲು ಪ್ರಯತ್ನಿಸುತ್ತೇನೆ. ಮತ್ತು ಇದು.. ಇದು ಅಂತಹ ಪಾತ್ರಗಳಲ್ಲೊಂದು. ನಾನು ಈವರೆಗೆ ನಟಿಸದ ಪಾತ್ರ. ನಾನೆಂದಿಗೂ ಕಾಲಿಡದ ಜಗತ್ತು.
ನಾನು ಈವರೆಗೆ ಭೇಟಿಯಾಗದ ನನ್ನ ವರ್ಷನ್. ಇದು ಉಗ್ರವಾಗಿದೆ. ಇದು ತೀವ್ರವಾಗಿದೆ. ಮತ್ತು ಇದು ಸಂಪೂರ್ಣ ಕಚ್ಛಾ. ನಾನು ತುಂಬಾನೇ ನರ್ವಸ್ ಆಗಿದ್ದೇನೆ, ಜೊತೆಗೆ ಉತ್ಸುಕಳಾಗಿದ್ದೇನೆ. ನಮ್ಮ ಸಿನಿಮಾ ನೋಡಲು ನಿಜವಾಗಿಯೂ ಹೆಚ್ಚು ಕಾಯಲು ಸಾಧ್ಯವಿಲ್ಲ. ಇದು ಕೇವಲ ಆರಂಭ. ಮೈಸಾ” ಎಂದು ಬರೆದುಕೊಂಡಿದ್ದಾರೆ.
ಮೈಸಾ ಚಿತ್ರದ ಮೂಲಕ, ರಶ್ಮಿಕಾ ತಮ್ಮ ನಟನಾ ವೃತ್ತಿಜೀವನಕ್ಕೆ ಮತ್ತೊಂದು ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ಅನ್ನು ಸೇರಿಸಿಕೊಂಡಿದ್ದಾರೆ.