
Majhi also ordered the suspension of DCP Bishnu Pati and Commandant Ajay Padhi for negligence in performing their duties
ಪುರಿ ದೇವಸ್ಥಾನದಲ್ಲಿ ನಡೆದ ಕಾಲ್ತುಳಿತದಲ್ಲಿ ಮೂವರು ಸಾವನ್ನಪ್ಪಿ, ಸುಮಾರು 50ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆಯ ನಂತರ ಮುಖ್ಯಮಂತ್ರಿ ಮೋಹನ್ ಮಾಝಿ ಅವರು ಜಿಲ್ಲಾಧಿಕಾರಿ ಸಿದ್ಧಾರ್ಥ್ ಶಂಕರ್ ಸ್ವೈನ್ ಮತ್ತು ಎಸ್ಪಿ ವಿನೀತ್ ಅಗರ್ವಾಲ್ ಅವರನ್ನು ವರ್ಗಾವಣೆ ಮಾಡಿ ಆದೇಶಿಸಿದ್ದಾರೆ.
ಕಾಲ್ತುಳಿತಕ್ಕೆ ಕಾರಣವಾದ ನಿರ್ಲಕ್ಷ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಸಿಎಂ, ಡಿಸಿಪಿ ಬಿಷ್ಣು ಪಾಟಿ ಮತ್ತು ಕಮಾಂಡೆಂಟ್ ಅಜಯ್ ಪಧಿ ಎಂಬಿಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿರುವುದಾಗಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ಖುರ್ದಾ ಜಿಲ್ಲಾ ಕಲೆಕ್ಟರ್ ಚಂಚಲ್ ರಾಣಾ ಅವರನ್ನು ಪುರಿಯ ಹೊಸ ಕಲೆಕ್ಟರ್ ಆಗಿ ನೇಮಿಸಿದ್ದಾರೆ. ಅಗರ್ವಾಲ್ ಅವರ ಬದಲಿಗೆ ಪಿನಕ್ ಮಿಶ್ರಾ ಅವರನ್ನು ಪುರಿ ಎಸ್ಪಿಯಾಗಿ ನೇಮಕಗೊಳಿಸಿದ್ದಾರೆ. ಅಭಿವೃದ್ಧಿ ಆಯುಕ್ತರ ಮೇಲ್ವಿಚಾರಣೆಯಲ್ಲಿ ಘಟನೆಯ ಕುರಿತು ಆಡಳಿತಾತ್ಮಕ ತನಿಖೆ ನಡೆಸುವಂತೆಯೂ ಸಿಎಂ ಆದೇಶಿಸಿದ್ದಾರೆ.
ಮೃತರ ಕುಟುಂಬಸ್ಥರಿಗೆ ₹25 ಲಕ್ಷ ಪರಿಹಾರ: ಮೃತರ ಹತ್ತಿರದ ಸಂಬಂಧಿಕರಿಗೆ ಒಡಿಶಾ ಸರ್ಕಾರ ತಲಾ 25 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಲಿದೆ ಎಂದು ಘೋಷಿಸಲಾಗಿದೆ.
ಆಡಳಿತ ಇಲಾಖೆ ಹೊರಡಿಸಿದ ಮತ್ತೊಂದು ಅಧಿಸೂಚನೆಯಲ್ಲಿ ಹಿರಿಯ ಅಧಿಕಾರಿ ಅರವಿಂದ್ ಅಗರ್ವಾಲ್ ಅವರನ್ನು ರಥಯಾತ್ರೆಯ ಒಟ್ಟಾರೆ ಮೇಲ್ವಿಚಾರಣೆಯ ಉಸ್ತುವಾರಿಯಾಗಿ ನೇಮಿಸಲಾಗಿದೆ. ಅಗರ್ವಾಲ್ ಅವರಿಗೆ ರಥಯಾತ್ರೆಯನ್ನು ನಿರ್ವಹಿಸಿದ ಅನುಭವವಿದೆ ಎಂದು ಹೇಳಿದೆ. ಪ್ರಸ್ತುತ ಅವರು ಉನ್ನತ ಶಿಕ್ಷಣ ಇಲಾಖೆಯಲ್ಲಿ ಆಯುಕ್ತ ಹಾಗು ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಇಲಾಖೆಯ ವಿಶೇಷ ಕಾರ್ಯದರ್ಶಿಯ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.