
Karnataka’s Nandini climbs Brand Finance rankings,
ಹಾಲು ಮತ್ತು ಹಾಲಿನ ಉತ್ಪನ್ನಗಳ ಮೂಲಕ ರಾಜ್ಯದಲ್ಲಿ ಮನೆಮಾತಾಗಿರುವ ಕೆಎಂಎಫ್ನ ‘ನಂದಿನಿ’ ಆಹಾರ ಮತ್ತು ಪಾನೀಯ ವಿಭಾಗದಲ್ಲಿ ದೇಶದಲ್ಲಿಯೇ ಅತ್ಯುತ್ತಮ ಟಾಪ್-4 ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಅಷ್ಟೇ ಅಲ್ಲದೆ, ಭಾರತೀಯ ಟಾಪ್-100 ಬ್ರ್ಯಾಂಡ್ಗಳಲ್ಲಿ ನಂದಿನಿಯು 38ನೇ ಸ್ಥಾನ ಅಲಂಕರಿಸಿದೆ.
ವಿಶ್ವದಾದ್ಯಂತ ಬ್ರ್ಯಾಂಡ್ಗಳ ಮೌಲ್ಯಮಾಪನಕ್ಕೆ ಹೆಸರಾಗಿರುವ ಬ್ರ್ಯಾಂಡ್ ಫೈನಾನ್ಸ್ ಸಂಸ್ಥೆ ಲಂಡನ್ನಲ್ಲಿ ಬಿಡುಗಡೆ ಮಾಡಿದ ಈ ರ್ಯಾಂಕಿಂಗ್ ಪಟ್ಟಿಯಲ್ಲಿ ಸಹಕಾರಿ ಕ್ಷೇತ್ರದ ನಂದಿನಿಯು ದೇಶದ ಅತ್ಯುತ್ತಮ ಬ್ರ್ಯಾಂಡ್ಗಳ ಪಟ್ಟಿಗೆ ಸೇರಿದೆ. ದೇಶದ ಆಹಾರ ಮತ್ತು ಪಾನೀಯ ವಿಭಾಗದಲ್ಲಿ ನಾಲ್ಕನೇ ಉತ್ತಮ ಬ್ರ್ಯಾಂಡ್ ಎನಿಸಿದೆ.
ಕಳೆದ ವರ್ಷವೂ ಬ್ರ್ಯಾಂಡ್ ಫೈನಾನ್ಸ್ ಸಂಸ್ಥೆ ಬಿಡುಗಡೆ ಮಾಡಿದ ರ್ಯಾಂಕಿಂಗ್ನಲ್ಲಿ ಕೆಎಂಎಫ್ನ ನಂದಿನಿ ನಾಲ್ಕನೇ ಸ್ಥಾನಗಳಿಸಿತ್ತು. ಈಗ 2025ರಲ್ಲೂ ಸಹ ಆಹಾರ ಮತ್ತು ಪಾನೀಯ ವಿಭಾಗದಲ್ಲಿ ಗಳಿಸಿದ ನಾಲ್ಕನೇ ಶ್ರೇಷ್ಠ ಬ್ರ್ಯಾಂಡ್ ಎನ್ನುವ ತನ್ನ ರ್ಯಾಂಕಿಂಗ್ ಅನ್ನು ಉಳಿಸಿಕೊಂಡಿದೆ.
“ಬ್ರ್ಯಾಂಡ್ ಫೈನಾನ್ಸ್ ಸಂಸ್ಥೆ ಉತ್ತಮ ಬ್ರ್ಯಾಂಡ್ಗಳ ಕುರಿತ ವರದಿಯಲ್ಲಿ ದೇಶೀಯ ಆಹಾರ ಮತ್ತು ಪಾನೀಯ ವಲಯದಲ್ಲಿ ಗುಜರಾತ್ ಮೂಲದ ಅಮೂಲ್ ಟಾಪ್-1, ಮದರ್ ಡೈರಿ ಟಾಪ್-2, ಬ್ರಿಟಾನಿಯಾ ಟಾಪ್-3, ಕೆಎಂಎಫ್ ನಂದಿನಿ ಟಾಪ್-4 ಹಾಗೂ ಡಾಬರ್ ಟಾಪ್-5ನೇ ಸ್ಥಾನವನ್ನು ಪಡೆದಿವೆ” ಎಂದು ಕೆಎಂಎಫ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಲಂಡನ್ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಬ್ರ್ಯಾಂಡ್ ಫೈನಾನ್ಸ್ ಸಂಸ್ಥೆಯು ಪ್ರತಿ ವರ್ಷ 25 ದೇಶಗಳಲ್ಲಿ ನೂರು ವಿವಿಧ ವಲಯಗಳ ಸುಮಾರು 6,000 ಸಂಸ್ಥೆಗಳ ಮೌಲ್ಯಮಾಪನ ನಡೆಸಿ ಉತ್ತಮ ಬ್ರ್ಯಾಂಡ್ ಹೊಂದಿರುವ ಸಂಸ್ಥೆಗಳಿಗೆ ರ್ಯಾಂಕ್ ನೀಡುತ್ತದೆ. ನಂದಿನಿಯು ಆಹಾರ ಮತ್ತು ಪಾನೀಯ ವಲಯದಲ್ಲಿ ಮಾತ್ರವಲ್ಲದೆ, ಭಾರತದ ಎಲ್ಲಾ ವಲಯಗಳ ಬ್ರ್ಯಾಂಡ್ಗಳ ರ್ಯಾಂಕಿಂಗ್ನಲ್ಲಿಯೂ ಉತ್ತಮ ಸ್ಥಾನ ಗಳಿಸಿದೆ.
ಕಳೆದ ವರ್ಷ ಬ್ರ್ಯಾಂಡ್ ಫೈನಾನ್ಸ್ ಬಿಡುಗಡೆ ಮಾಡಿದ ಟಾಪ್-100 ರ್ಯಾಂಕಿಂಗ್ ವರದಿಯಲ್ಲಿ 43ನೇ ಸ್ಥಾನಗಳಿಸಿದ್ದ ನಂದಿನಿ, ಈ ವರ್ಷದ ಪಟ್ಟಿಯಲ್ಲಿ ದೇಶದ ಟಾಪ್ 38ನೇ ಉತ್ತಮ ಬ್ರ್ಯಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.