
Alia Bhatt Assistant Arrested
(ಅಶ್ವವೇಗ) Ashwaveega News 24×7 ಜು.09: ಬಾಲಿವುಡ್ ನಟಿ ಅಲಿಯಾ ಭಟ್ರ ಮಾಜಿ ಪರ್ಸನಲ್ ಅಸಿಸ್ಟೆಂಟ್ ವೇದಿಕಾ ಪ್ರಕಾಶ್ ಶೆಟ್ಟಿಯನ್ನು ಮುಂಬೈನ ಜೂಹೂ ಪೊಲೀಸರು ಬಂಧಿಸಿದ್ದಾರೆ. ಅಲಿಯಾ ಭಟ್ ಪ್ರೊಡಕ್ಷನ್ ಹೌಸ್ ಎಟರ್ನಾಲ್ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ಗೆ ಹಾಗೂ ಅಲಿಯಾ ಭಟ್ ವೈಯಕ್ತಿಕ ಬ್ಯಾಂಕ್ ಖಾತೆಯಿಂದ 77 ಲಕ್ಷ ರೂಪಾಯಿ ಹಣ ಲಪಟಾಯಿಸಿ ವೇದಿಕಾ ಪ್ರಕಾಶ್ ಶೆಟ್ಟಿ ನಾಪತ್ತೆ ಆಗಿದ್ದರು.
ಫೇಕ್ ಬಿಲ್, ನಕಲಿ ಸಹಿ ಹಾಕಿ 2 ಬ್ಯಾಂಕ್ ಖಾತೆಗಳಿಂದ ವೇದಿಕಾ ಶೆಟ್ಟಿ ಹಣ ಲಪಟಾಯಿಸಿದ್ದರು. ಈ ಬಗ್ಗೆ ಅಲಿಯಾ ಭಟ್ ತಾಯಿ ಸೋನಿ ರಾಜಧಾನ್ ರಿಂದ ಮುಂಬೈನ ಜೂಹೂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೂರು ವರ್ಷಗಳ ಕಾಲ ಅಲಿಯಾ ಭಟ್ಗೆ ಪರ್ಸನಲ್ ಅಸಿಸ್ಟೆಂಟ್ ಆಗಿದ್ದ ವೇದಿಕಾ ಶೆಟ್ಟಿ ಬರೋಬ್ಬರಿ 77 ಲಕ್ಷ ರೂಪಾಯಿ ಹಣ ವಂಚಿಸಿದ್ದರು.
ಈ ವರ್ಷದ ಜನವರಿ 23 ರಂದು ಸೋನಿ ರಾಜಧಾನ್ ಪೊಲೀಸರಿಗೆ ದೂರು ನೀಡಿದ್ದರು. ದೂರು ನೀಡಿದ 5 ತಿಂಗಳ ಬಳಿಕ ವೇದಿಕಾ ಶೆಟ್ಟಿ ಬಂಧನವಾಗಿದೆ. ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ ವೇದಿಕಾ ಶೆಟ್ಟಿಯನ್ನು ಮುಂಬೈನ ಜೂಹೂ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಕೋರ್ಟ್ ಗೆ ಹಾಜರುಪಡಿಸಿ, ಟ್ರಾನ್ಸಿಟ್ ರಿಮ್ಯಾಂಡ್ ಪಡೆದು ಮುಂಬೈಗೆ ಕರೆದೊಯ್ದಿದ್ದಾರೆ. ಬಳಿಕ ಮುಂಬೈನ ಕೋರ್ಟ್ಗೆ ಹಾಜರುಪಡಿಸಿರುವ ಪೊಲೀಸರು ವೇದಿಕಾ ಶೆಟ್ಟಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.