
cm siddaramaiah
Ashwaveega News 24×7 ಜು. 21: ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೀಡಿದ್ದ ನೋಟಿಸ್ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು, ಈ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಸ್ವಾಗತಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ನನ್ನ ಪತ್ನಿ ಶ್ರೀಮತಿ ಪಾರ್ವತಿಯವರ ವಿರುದ್ಧ ತನಿಖೆ ನಡೆಸಲು ಇ.ಡಿ. ಸಲ್ಲಿಸಿರುವ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿ ನೀಡಿರುವ ಐತಿಹಾಸಿಕ ಆದೇಶ ಕೇಂದ್ರ ಸರ್ಕಾರದ ಕಪಾಳಕ್ಕೆ ನ್ಯಾಯದಂಡ ಬಾರಿಸಿರುವ ತಪರಾಕಿಯಾಗಿದೆ ಎಂದಿದ್ದಾರೆ.
ಸುಪ್ರೀಂಕೋರ್ಟ್ ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಕೆ.ವಿನೋದಚಂದ್ರ ಅವರ ಆದೇಶವನ್ನು ನಾನು ವಿನೀತನಾಗಿ ಸ್ವಾಗತಿಸುತ್ತೇನೆ. ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ನಾನು ಸದಾ ಸಂವಿಧಾನ ಮತ್ತು ನೆಲದ ಕಾನೂನಿಗೆ ತಲೆಬಾಗುತ್ತಾ ಬಂದವನು. ಈ ನಂಬಿಕೆಯನ್ನು ಸುಪ್ರೀಂ ಕೋರ್ಟ್ ಆದೇಶ ಉಳಿಸಿಕೊಂಡು ಕಾಪಾಡಿದೆ ಎಂದು ತಿಳಿಸಿದರು.
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪತ್ನಿ ಬಿಎಂ ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್ ಅವರಿಗೆ ಇ.ಡಿ ನೀಡಿದ್ದ ನೋಟಿಸ್ ಅನ್ನು ರದ್ದುಗೊಳಿಸಿದ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಇ.ಡಿ ಸಲ್ಲಿಸಿದ್ದ ರಜಾಕಾಲದ ವಿಶೇಷ ಅರ್ಜಿಯನ್ನು ವಜಾಗೊಳಿಸಿದೆ.
ಜಾರಿ ನಿರ್ದೇಶನಾಲಯದ ಬಗ್ಗೆ ನಕಾರಾತ್ಮಕ ಟೀಕೆಗಳನ್ನು ಮಾಡದಂತೆ ನ್ಯಾಯಾಲಯ ಎಚ್ಚರಿಸಿದೆ. ಹೈಕೋರ್ಟ್ನ ಏಕಸದಸ್ಯ ಪೀಠ ನೀಡಿರುವ ಆದೇಶದಲ್ಲಿ ಯಾವುದೇ ದೋಷ ಕಂಡುಬಾರದ ಹಿನ್ನೆಲೆಯಲ್ಲಿ ಅರ್ಜಿಯನ್ನು ವಜಾಗೊಳಿಸಿದೆ.