
Ashwaveega News 24×7 ಅ. 15: ಕಲ್ಯಾಣ ನಾಡಿನ ಪ್ರಸಿದ್ಧ ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದ 8ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪಾ (91) ಅವರು ಇಂದು ಲಿಂಗೈಕ್ಯರಾದರು. ವಯೋಸಹಜ ಕಾಯಿಲೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದ ಇವರು ದಾಸೋಹ ಮಹಾ ಮನೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆರೋಗ್ಯ ಮತ್ತಷ್ಟು ಕ್ಷೀಣಿಸಿದ ಹಿನ್ನೆಲೆಯಲ್ಲಿ ಇಂದು ರಾತ್ರಿ 8 ಗಂಟೆಯ ಸುಮಾರಿಗೆ ಆಂಬ್ಯುಲೆನ್ಸ್ ಮೂಲಕ ದಾಸೋಹ ಮಹಾಮನೆಗೆ ಕರೆತರಲಾಗಿತ್ತು.
ಬಳಿಕ ಆಂಬ್ಯುಲೆನ್ಸ್ ನಲ್ಲೇ ಶರಣಬಸವೇಶ್ವರ ದೇವಸ್ಥಾನಕ್ಕೆ ಐದು ಸುತ್ತು ಪ್ರದಕ್ಷಿಣೆ ಹಾಕಿ ಶರಣಬಸವೇಶ್ವರ ಗರ್ಭಗುಡಿಯಲ್ಲಿ ತೀರ್ಥ ನೀಡಲಾಗಿದೆ. ಆ ನಂತರ ದಾಸೋಹ ಮಹಾಮನೆಗೆ ಕರೆದುಕೊಂಡು ಹೋಗಿದ್ದು, ಮಹಾಮನೆಯಲ್ಲಿ ಅಪ್ಪಾ ಅವರು ಇಹಲೋಕ ತ್ಯಜಿಸಿದರು.
ಡಾ.ಶರಣಬಸವಪ್ಪ ಅಪ್ಪಾ ಅವರು ಕಲ್ಯಾಣ ನಾಡಿನಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದವರು. ಖಾಸಗಿ ಶರಣಬಸವ ವಿಶ್ವವಿದ್ಯಾಲಯ ಸ್ಥಾಪಿಸಿ ಎಂಬಿಎ, ಇಂಜಿನಿಯರಿಂಗ್ ಸೇರಿದಂತೆ ಉನ್ನತ ಮಟ್ಟದ ಶಿಕ್ಷಣದ ವ್ಯವಸ್ಥೆ ಕಲ್ಪಿಸಿದ್ದರು. ಸಮಾಜ ಸೇವೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಇವರು ಅಪಾರ ಸಂಖ್ಯೆಯ ಭಕ್ತರನ್ನು ಅಗಲಿದ್ದಾರೆ.
ಇನ್ನು 17-02-1957ರಲ್ಲಿ ಹಾವೇರಿಯ ಶಿವಪ್ಪ ಆನೂರ್ ಶೆಟ್ಟರ ಮಗಳಾದ ಕೋಮಲಾ ದೇವಿ ಅವರೊಂದಿಗೆ ವಿವಾಹವಾದ ಡಾ. ಅಪ್ಪಾಗೆ ಐವರು ಪುತ್ರಿಯರು. ಡಾ. ಗಂಗಾಂಬಿಕೆ, ಪ್ರೋ.ನೀಲಾಂಬಿಕೆ, ಶ್ರೀಮತಿ ಮುಕ್ತಾಂಬಿಕೆ, ಶ್ರೀಮತಿ ಉಮಾ ಹಾಗೂ ಗೋದಾವರಿ ಅವರು ಅಪ್ಪ ಅವರ ಪುತ್ರಿಯರಾಗಿದ್ದಾರೆ. ಅವರಲ್ಲಿ ಪುತ್ರಿ ಮುಕ್ತಾಂಬಿಕೆ ಚಿಕ್ಕ ವಯಸ್ಸಿನಲ್ಲಿಯೇ ನಿಧನರಾಗಿದ್ದಾರೆ. ಅಪ್ಪಾ ಅವರ ಮೊದಲ ಪತ್ನಿ ಕೋಮಲಾದೇವಿ ಅನಾರೋಗ್ಯದಿಂದ 23-03-1993ರಂದು ಇಹಲೋಕ ತ್ಯಹಿಸಿದರು.
ಮೊದಲ ಪತ್ನಿ ನಿಧನದ ನಂತರ ತಮ್ಮ ಅಕ್ಕ ಚೆನ್ನಬಸವಮ್ಮ ದೇಶಮುಖ ವಡಗಾಂವ ಅವರ ಪುತ್ರಿ ದಾಕ್ಷಾಯಿಣಿ ಅವ್ವಾ ಅವರೊಂದಿಗೆ 1993ರ ನವೆಂಬರ್ 30ರಂದು ದ್ವಿತೀಯ ವಿವಾಹವಾಗಿದ್ದು, ಇವರಿಗೆ ಕುಮಾರಿ ಶಿವಾನಿ, ಕುಮಾರಿ ಕೋಮಲಾ, ಕುಮಾರಿ ಮಹೇಶ್ವರಿ ಹಾಗೂ ಚಿ.ದೊಡ್ಡಪ್ಪ ಅಪ್ಪ ಎಂಬ ನಾಲ್ವರು ಮಕ್ಕಳು ಜನಿಸಿದರು. ಪ್ರಸ್ತುತ ಚಿ.ದೊಡ್ಡಪ್ಪ ಅಪ್ಪಾ ಅವರು 9ನೇ ಪೀಠಾಧಿಪತಿಗಳಾಗಿದ್ದಾರೆ.