
PM Modi Japan Visits
Ashwaveega News 24×7 ಅ. 30: ಪ್ರಧಾನಿ ಮೋದಿ ಅವರು ಜಪಾನ್ ಭೇಟಿಯ ಎರಡನೇ ದಿನವಾದ ಶನಿವಾರ, ಅಲ್ಲಿನ ಪ್ರಧಾನಿ ಶಿಗೇರು ಇಶಿಬಾ ಅವರೊಂದಿಗೆ ಟೋಕಿಯೊದಿಂದ ಸೆಂಡೈಗೆ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದರು. ಟೋಕಿಯೊದಿಂದ 300 ಕಿ.ಮೀ ದೂರದಲ್ಲಿರುವ ಜಪಾನಿನ ಮಿಯಾಗಿ ಪ್ರಾಂತ್ಯದಲ್ಲಿರುವ ಸೆಂಡೈನಲ್ಲಿರುವ ಸೆಮಿಕಂಡಕ್ಟರ್ ಸ್ಥಾವರಕ್ಕೆ ಉಭಯ ನಾಯಕರು ಭೇಟಿ ನೀಡಿದರು.
ನಿರ್ಣಾಯಕ ತಂತ್ರಜ್ಞಾನ ಕ್ಷೇತ್ರದಲ್ಲಿ ಉಭಯ ದೇಶಗಳು ಸಹಕಾರವನ್ನು ಗಟ್ಟಿಗೊಳಿಸಲು ನಿರ್ಧರಿಸಿದ ಒಂದು ದಿನದ ಬೆನ್ನಲ್ಲೇ, ಉಭಯ ನಾಯಕರು ಸ್ನೇಹಮಯ ಸಂದರ್ಭದಲ್ಲಿ ಕಾಣಿಸಿಕೊಂಡರು. ಬಳಿಕ, ಪ್ರಧಾನಿ ಇಶಿಬಾ ಸೆಂಡೈನಲ್ಲಿ ಮೋದಿ ಅವರಿಗೆ ಗೌರವಾರ್ಥವಾಗಿ ಭೋಜನ ಕೂಟ ಆಯೋಜಿಸಿದ್ದರು. ಈ ವೇಳೆ, ಮಿಯಾಗಿ ಪ್ರಾಂತ್ಯದ ಗವರ್ನರ್ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.
ಪ್ರಧಾನಿ ಮೋದಿ ಅವರು ಸೆಂಡೈನಲ್ಲಿ ಟೋಕಿಯೋ ಎಲೆಕ್ಟ್ರಾನ್ ಮಿಯಾಗಿ ಲಿಮಿಟೆಡ್ (TEL ಮಿಯಾಗಿ) ಗೆ ನೀಡಿದ ಭೇಟಿಯು ಭಾರತದ ಬೆಳೆಯುತ್ತಿರುವ ಸೆಮಿಕಂಡಕ್ಟರ್ ಉತ್ಪಾದನಾ ಪರಿಸರ ವ್ಯವಸ್ಥೆ ಮತ್ತು ಈ ವಲಯದಲ್ಲಿನ ಜಪಾನ್ನ ಸಾಮರ್ಥ್ಯಗಳ ನಡುವಿನ ಪೂರಕತೆಯನ್ನು ಎತ್ತಿ ತೋರಿಸಿದೆ.
ಸೆಮಿಕಂಡಕ್ಟರ್ ವಲಯದ ಪ್ರಮುಖ ಜಪಾನ್ ಕಂಪನಿಯಾದ TEL ಮಿಯಾಗಿ, ಭಾರತದೊಂದಿಗೆ ಸಹಯೋಗಕ್ಕಾಗಿ ಹಲವು ಯೋಜನೆಗಳನ್ನು ಹೊಂದಿದೆ. ಜಾಗತಿಕ ಸೆಮಿಕಂಡಕ್ಟರ್ ವಲಯದಲ್ಲಿ TELನ ಪಾತ್ರ, ಅದರ ಅತ್ಯಾಧುನಿಕ ಉತ್ಪಾದನಾ ಸಾಮರ್ಥ್ಯಗಳು ಮತ್ತು ಭಾರತದೊಂದಿಗಿನ ಸಹಯೋಗಗಳ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಅಲ್ಲಿನ ಅಧಿಕಾರಿಗಳು ವಿವರಿಸಿದರು ಎಂದು ವಿದೇಶಾಂಗ ಸಚಿವಾಲಯವು (MEA) ಹೇಳಿಕೆಯಲ್ಲಿ ತಿಳಿಸಿದೆ.
ಈ ಭೇಟಿ ವೇಳೆ ತಮ್ಮೊಂದಿಗೆ ಜೊತೆಯಾದ ಪ್ರಧಾನಿ ಇಶಿಬಾ ಅವರಿಗೆ ಮೋದಿ ಅವರು ತಮ್ಮ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ, ಈ ಕಾರ್ಯತಂತ್ರದ ಕ್ಷೇತ್ರದಲ್ಲಿ ಜಪಾನ್ನೊಂದಿಗೆ ನಿಕಟವಾಗಿ ಕೆಲಸ ಮಾಡಲು ಭಾರತ ಸದಾ ಸಿದ್ಧವಾಗಿದೆ ಎಂದು ಪುನರುಚ್ಚರಿಸಿದರು ಎಂದು ಎಂಇಎ ಹೇಳಿದೆ.