
Ashwaveega News 24×7 ಸೆ. 01: ಧರ್ಮಸ್ಥಳ ಪ್ರಕರಣದಲ್ಲಿ ನಿಮ್ಮ ಎಸ್ಐಟಿ ತನಿಖೆ ನಡೆಯಲಿ. ಆದರೆ, ದೇಶ ದ್ರೋಹಿಗಳು ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹೊರ ದೇಶಗಳಿಂದಲೂ ಕೋಟಿ ಕೋಟಿ ಪಡೆದು ಶ್ರೀ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇದರ ಹಿಂದಿರುವ ಕೈಗಳನ್ನು ಹತ್ತಿಕ್ಕುವ ಕೆಲಸವಾಗಬೇಕೆಂದರೆ ಕಾಂಗ್ರೆಸ್ ಸರ್ಕಾರದಿಂದ ಆಗಲ್ಲ, ಈ ಪ್ರಕರಣವನ್ನು ಸಿಬಿಐ ಅಥವಾ ಎನ್ಐಎ ತನಿಖೆಗೆ ವಹಿಸಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ಧರ್ಮಸ್ಥಳದಲ್ಲಿ ಬಿಜೆಪಿ ವತಿಯಿಂದ ಸೋಮವಾರ ಆಯೋಜಿಸಿದ್ದ ಧರ್ಮಸ್ಥಳ ಚಲೋ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದ್ದಾರೆ. ಬಿಜೆಪಿ ರಾಜಕೀಯ ಕಾರಣಕ್ಕೆ ಧರ್ಮಸ್ಥಳ ಚಲೋ ನಡೆಸುತ್ತಿದ್ದಾರೆ ಎಂದು ಕೆಲವರು ಟೀಕೆ ಮಾಡಿದರು. ಆದರೆ, ನಾನು ಸ್ಪಷ್ಟಪಡಿಸುವುದು ಏನೆಂದರೆ ಸಮಾವೇಶಕ್ಕೆ ಬಂದವರು, ಸ್ವಾಭಿಮಾನಿ ಹಿಂದೂ ಕಾರ್ಯಕರ್ತರು ಬಂದಿದ್ದಾರೆ ವಿನಾ, ಯಾರಿಗೂ ದುಡ್ಡು ಕೊಟ್ಟು ಕರೆಸುವ ಕೆಲಸ ಮಾಡಿಲ್ಲ.
ಕಳೆದ ಎರಡು ವರ್ಷದಿಂದ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಗೆ ಅವಮಾನ ಮಾಡುವ ಸರ್ಕಾರವಿದೆ. ಹಿಂದೂಗಳ ಪವಿತ್ರ ಕ್ಷೇತ್ರಕ್ಕೆ ಅಪಚಾರ ಎಸಗುತ್ತಿರುವವರಿಗೆ ಪಾಠ ಕಲಿಸಬೇಕು. ಕ್ಷೇತ್ರದ ಬಗ್ಗೆ ದಿನನಿತ್ಯ ಅಪಪ್ರಚಾರ ನಡೆಯುತ್ತಿದೆ ಎಂದು ಕಿಡಿಕಾರಿದರು.
ಸೌಜನ್ಯಾ ಪ್ರಕರಣದಲ್ಲಿ ಬಿಜೆಪಿ ನಿಲುವಿನ ಬಗ್ಗೆ ಪ್ರತಿಕ್ರಿಯಿಸಿ, ಸೌಜನ್ಯಾ ಹತ್ಯೆ ಪ್ರಕರಣದ ಮರು ತನಿಖೆಗೆ ರಾಜ್ಯ ಸರ್ಕಾರ ಘೋಷಣೆ ಮಾಡಲಿ. ಇದಕ್ಕಾಗಿ ಈ ವಿಚಾರದಲ್ಲಿ ನಾವು ಸಂಪೂರ್ಣವಾಗಿ ಬೆಂಬಲ ಕೊಡುತ್ತೇವೆ ಎಂದು ಹೇಳಿದರು.
ಸಿದ್ದರಾಮಯ್ಯನವರೇ ನಿಮ್ಮ ಆಡಳಿತ ವೈಖರಿ ನೋಡುತ್ತಿದ್ದೇವೆ. ಧರ್ಮಸ್ಥಳದ ನಂತರ ಈಗ ಚಾಮುಂಡಿ ಬೆಟ್ಟಕ್ಕೆ ಕೈ ಹಾಕಲು ಹೋಗಿದ್ದೀರಿ. ಈ ಹಿಂದೂ ವಿರೋಧಿ ಸರ್ಕಾರವನ್ನು ಬುಡಸಮೇತ ಕಿತ್ತೊಗೆಯಬೇಕು. ಅಣ್ಣಪ್ಪ ಸ್ವಾಮಿ, ಮಂಜುನಾಥಸ್ವಾಮಿ ವಿಚಾರದಲ್ಲಿ ಭಕ್ತರು ಸಮಾಧಾನವಾಗಿ ಕುಳಿತಿದ್ದರು. ಈಗ ಭಕ್ತರ ಸಹನೆಯ ಕಟ್ಟೆ ಒಡೆಯುವ ಸ್ಥಿತಿ ಬಂದಿದೆ.
ನಿಮ್ಮ ಎಸ್ಐಟಿ ತನಿಖೆ ನಡೆಯಲಿ. ಆದರೆ, ದೇಶ ದ್ರೋಹಿಗಳು ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹೊರ ದೇಶಗಳಿಂದಲೂ ಕೋಟಿ ಕೋಟಿ ಪಡೆದು ಅಪಪ್ರಚಾರ ಮಾಡುತ್ತಿದ್ದಾರೆ. ಇದರ ಹಿಂದೆ ಯಾವುದೇ ಶಕ್ಷಿ ಇದ್ದರೂ ಅವರನ್ನು ಹತ್ತಿಕ್ಕುವ ಕೆಲಸವಾಗಬೇಕು ಎಂದರೆ, ಕಾಂಗ್ರೆಸ್ ಸರ್ಕಾರದಿಂದ ಆಗಲ್ಲ. ಹೀಗಾಗಿ ಪ್ರಕರಣವನ್ನು ಸಿಬಿಐ ಅಥವಾ ಎನ್ಐಎ ಮೂಲಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಇನ್ನು ಸಮಾವೇಶ ಮುಗಿಸಿ ನೇರವಾಗಿ ಬಿ.ವೈ.ವಿಜಯೇಂದ್ರ ಹಾಗೂ ಮುಖಂಡರು ಸೌಜನ್ಯ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಸೌಜನ್ಯ ತಾಯಿ ಹಾಗು ಸೌಜನ್ಯ ಮಾವನನ್ನು ಬಿಜೆಪಿ ನಿಯೋಗ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ
ಹರೀಶ್ ಪೂಂಜಾ, ಬ್ರಿಜೇಷ್ ಚೌಟ, ತಮ್ಮೇಶ್ ಗೌಡ, ಪ್ರೀತಮ್ ಗೌಡ ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರು ಉಪಷ್ಥಿತರಿದ್ದರು.