
Ashwaveega News 24×7 ಸೆ. 01: ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ 54ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅಭಿನಯ ಚಕ್ರವರ್ತಿಯ ಹುಟ್ಟುಹಬ್ಬ ಆಚರಿಸಲು ಕಾಯುತ್ತಿರುವ ಅವರ ಅಭಿಮಾನಿಗಳಿಗೆ ಸೆಪ್ಟೆಂಬರ್ 1ರಂದೇ ದೊಡ್ಡ ಉಡುಗೊರೆ ಸಿಕ್ಕಿದೆ. ಸುದೀಪ್ ಅವರ ಮುಂದಿನ ಚಿತ್ರದ ಟೈಟಲ್ ಇದೀಗ ರಿವೀಲ್ ಆಗಿದ್ದು, ಫಸ್ಟ್ ಲುಕ್ ಟೀಸರ್ ಕೂಡ ಹೊರಬಿದ್ದಿದೆ.
ಕಳೆದ ವರ್ಷ ತೆರೆಕಂಡ ʼಮ್ಯಾಕ್ಸ್ʼ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆದ ವಿಜಯ್ ಕಾರ್ತಿಕೇಯ ಆ್ಯಕ್ಷನ್ ಕಟ್ ಹೇಳಿತ್ತಿರುವ ಈ ಚಿತ್ರಕ್ಕೆ ‘ಮಾರ್ಕ್’ ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ʼಕೆ 47ʼ ಟೈಟಲ್ ಇಟ್ಟು ಜುಲೈಯಲ್ಲಿ ಶೂಟಿಂಗ್ ಆರಂಭಿಸಲಾಗಿತ್ತು.
ಇದೀಗ ರಿಲೀಸ್ ಆಗಿರುವ ʼಮಾರ್ಕ್ʼ ಸಿನಿಮಾದ ಫಸ್ಟ್ ಲುಕ್ ಟೀಸರ್ ಗಮನ ಸೆಳೆದಿದ್ದು, ಸುದೀಪ್ ಮತ್ತೊಮ್ಮೆ ಪವರ್ಫುಲ್ ಪಾತ್ರದಲ್ಲಿ ಮಿಂಚಿದ್ದಾರೆ. ಅವರ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದು, ಹುಚ್ಚೆದ್ದು ಕುಣಿದಿದ್ದಾರೆ. ಅಜಯ್ ಮಾರ್ಕಾಂಡೆ ಆಲಿಯಾಸ್ ಮಾರ್ಕ್ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದು, ಇದು ಕೂಡ ʼಮ್ಯಾಕ್ಸ್ʼನಂತೆ ಭರ್ಜರಿ ಆ್ಯಕ್ಷನ್ ಚಿತ್ರ ಎನ್ನುವ ಸೂಚನೆ ಟೀಸರ್ನಲ್ಲೇ ಸಿಕ್ಕಿದೆ. ಕನ್ನಡದ ಜತೆಗೆ ಇದು ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ತೆರೆ ಕಾಣಲಿದೆ.
ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿದೆ. ಈ ಚಿತ್ರವನ್ನು ಸತ್ಯಜ್ಯೋತಿ ಫಿಲ್ಮ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ಗಳು ಜತೆಯಾಗಿ ನಿರ್ಮಿಸುತ್ತಿದ್ದು, ಅರ್ಜುನ್ ತ್ಯಾಗರಾಜನ್ ಮತ್ತು ಸೆಂಥಿಲ್ ತ್ಯಾಗರಾಜನ್ ಬಂಡವಾಳ ಹೂಡಿದ್ದಾರೆ. ಛಾಯಾಗ್ರಾಹಕರಾಗಿ ಶೇಖರ್ ಚಂದ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸದ್ಯ ಚಿತ್ರದ ಬಹುತೇಕ ಭಾಗದ ಶೂಟಿಂಗ್ ಪೂರ್ಣಗೊಂಡಿದ್ದು, ಕ್ರಿಸ್ಮಸ್ಗೆ ತೆರೆಗೆ ಬರಲಿದೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದ ಸುದೀಪ್, ʼʼನಾವು ಅಂದುಕೊಂಡಂತೆ ವೇಗವಾಗಿ ಶೂಟಿಂಗ್ ಮಾಡುತ್ತಿದ್ದೇವೆ. ಈಗಾಗಲೇ ಸಿನಿಮಾದ ಶೇ. 60ರಷ್ಟು ಶೂಟ್ ಪೂರ್ಣಗೊಂಡಿದೆ. ಅಕ್ಟೋಬರ್ ವೇಳೆಗೆ ಸಿನಿಮಾದ ಚಿತ್ರೀಕರಣ ಪೂರ್ಣಗೊಳ್ಳಲಿದೆ. ನವೆಂಬರ್ನಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯಲಿದ್ದು, ಇದಾದ ಬಳಿಕ ಅನೂಪ್ ಭಂಡಾರಿ ಜತೆಗಿನ ʼಬಿಲ್ಲ ರಂಗ ಬಾಷʼ ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದೇನೆ. ಕ್ರಿಸ್ಮಸ್ಗೆ ʼಕೆ 47ʼ ಬಂದೇ ಬರುತ್ತದೆ’’ ಎಂದು ಹೇಳಿದ್ದರು.