
Ashwaveega News 24×7 ಸೆ. 15: ರಿಯಲ್ ಸ್ಟಾರ್ ಉಪೇಂದ್ರ ಅವರ ಪತ್ನಿ ನಟಿ ಪ್ರಿಯಾಂಕ ಉಪೇಂದ್ರಗೆ ಮೊಬೈಲ್ ಸಂಕಷ್ಟ ಎದುರಾಗಿದೆ. ನಟಿಯ ಮೊಬೈಲ್ ಹ್ಯಾಕ್ ಮಾಡಿರೋ ಕಿಡಿಗೇಡಿಗಳು ಪ್ರಿಯಾಂಕ ಉಪೇಂದ್ರ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ.
ಕಾಂಟಾಕ್ಟ್ ಲಿಸ್ಟ್ ನಲ್ಲಿರುವ ಎಲ್ಲರಿಗೂ ಹಣ ನೀಡುವಂತೆ ಮೆಸೇಜ್ ಮಾಡಲಾಗಿದ್ದು, ಎಮರ್ಜೆನ್ಸಿ ಇದೆ, ಹಣ ನೀಡಿ ಎಂದು ಪ್ರಿಯಾಂಕ ಉಪೇಂದ್ರ ನಂಬರ್ ನಿಂದ ಮೆಸೇಜ್ ಹೋಗಿದೆ ಎಂದು ತಿಳಿದು ಬಂದಿದೆ.
ಮೊಬೈಲ್ ಹ್ಯಾಕ್ ಆದ ಬಗ್ಗೆ ಉಪೇಂದ್ರ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಸಿನಿಮಾಗಳಲ್ಲಿ ಮೊಬೈಲ್ಗಳನ್ನು ಹ್ಯಾಕ್ ಮಾಡುವಂತೆ ಇಲ್ಲಿಯೂ ಆಗಿದೆ. ‘ಪ್ರಿಯಾಂಕಾಗೆ ಬೆಳಿಗ್ಗೆ ಒಂದು ಮೆಸೇಜ್ ಬಂತು. ಪ್ರಿಯಾಂಕಾ ಆರ್ಡರ್ ಮಾಡಿದ ಪಾರ್ಸಲ್ ಒಂದು ಬರೋದಿತ್ತು. ಪಾರ್ಸಲ್ ಸಂಬಂಧದ್ದೇ ಮೆಸೇಜ್ ಇದು ಎಂದು ಅವಳು ಭಾವಿಸಿದಳು.
ಹ್ಯಾಶ್ ಟ್ಯಾಗ್ ಒತ್ತಿ ಆ ನಂಬರ್ ಡಯಲ್ ಮಾಡಿ, ಈ ನಂಬರ್ ಡಯಲ್ ಮಾಡಿ ಎಂದು ಮೆಸೇಜ್ ಮಾಡಿದಾತ ಹೇಳಿದ್ದಾನೆ. ಅವಳು ಹಾಗೆ ಮಾಡಿದಳು.
ಅಲ್ಲಿ ಆಗುತ್ತಿಲ್ಲ ಎಂದು ನನ್ನ ಮೊಬೈಲ್ನಿಂದಲೂ ಪ್ರಯತ್ನಿಸಿದ್ದಾಳೆ. ಹೀಗಾಗಿ, ನನ್ನ ಮೊಬೈಲ್ ಕೂಡ ಹ್ಯಾಕ್ ಆಗಿದೆ ಎನಿಸುತ್ತಿದೆ’ ಎಂದು ಉಪೇಂದ್ರ ಹೇಳಿದ್ದಾರೆ.
‘ನನ್ನ ಮೊಬೈಲ್ನಿಂದ ಅಥವಾ ಪ್ರಿಯಾಂಕಾ ಮೊಬೈಲ್ನಿಂದ ಹಣ ಕೊಡಿ ಎಂದು ಮೆಸೇಜ್ ಬಂದರೆ ಇಗ್ನೋರ್ ಮಾಡಿ’ ಎಂದು ಉಪೇಂದ್ರ ಕೇಳಿಕೊಂಡಿದ್ದಾರೆ.